ಬದುಕಿಗೆ ಸಂಸ್ಕಾರ, ಶಿಕ್ಷಣವೆರಡೂ ಸಿಗಲಿ: ಚಂದ್ರಕಲಾ ಭಟ್ಟ

KannadaprabhaNewsNetwork | Published : Oct 23, 2024 12:39 AM

ಸಾರಾಂಶ

ಮಕ್ಕಳಿಗೆ ಸಂಸ್ಕಾರ ನೀಡುವುದು ಮಾತೆಯರ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಆ ನಿಟ್ಟಿನಲ್ಲಿ ಇಲ್ಲಿ ಮಾತೆಯರಿಗೆ ವಿಶೇಷ ಅವಕಾಶ ಮಾಡಿಕೊಟ್ಟಿರುವುದು ಮಾದರಿಯಾಗಿದೆ.

ಕುಮಟಾ: ಶಿಕ್ಷಣ ಸಂಸ್ಥೆಗಳಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟಿನಂತೆಯೇ ಬದುಕಿಗೆ ಬೇಕಾದ ಸಂಸ್ಕಾರ ಹಾಗೂ ಶಿಕ್ಷಣವೆರಡನ್ನೂ ನೀಡುವ ಪ್ರಾಮಾಣಿಕ ಪ್ರಯತ್ನ ಎಲ್ಲೆಡೆ ನಡೆಯಬೇಕು. ಇದು ಸಾರ್ಥಕ ಮತ್ತು ಅರ್ಥಪೂರ್ಣ ಮಾದರಿ ಎಂದು ಯಕ್ಷಗಾನ ಅರ್ಥಧಾರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಚಂದ್ರಕಲಾ ಭಟ್ಟ ತಿಳಿಸಿದರು.ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿವಿಎಸ್‌ಕೆ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನೂತನ ನಿರ್ಮಿತ ಅಮೃತ ಶಿಲೆಯ ಶಾರದಾ ಮೂರ್ತಿ ಅನಾವರಣಗೊಳಿಸಿ, ಗೋಪೂಜೆ, ಮಾತಾ- ಪಿತೃ ಪೂಜೆ, ಮಾತೃಮಂಡಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಿಗೆ ಸಂಸ್ಕಾರ ನೀಡುವುದು ಮಾತೆಯರ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಆ ನಿಟ್ಟಿನಲ್ಲಿ ಇಲ್ಲಿ ಮಾತೆಯರಿಗೆ ವಿಶೇಷ ಅವಕಾಶ ಮಾಡಿಕೊಟ್ಟಿರುವುದು ಮಾದರಿಯಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಭಗವದ್ಗೀತಾ ಉಪನ್ಯಾಸಕಿ ಶಾರದಾ ಹೆಗಡೆ ಮಾತನಾಡಿ, ಮಾತೃ ಮಂಡಳಿಯವರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹಾಗೂ ಸಂಸ್ಥೆ ಜತೆಗೆ ತೊಡಗಿಕೊಳ್ಳುವ ರೀತಿ ಅನನ್ಯವಾಗಿದೆ. ಇಲ್ಲಿನ ಭಗವದ್ಗೀತೆಯನ್ನು ಪಠಿಸುವ ಪುಟಾಣಿ ಮಕ್ಕಳನ್ನು ನೋಡುವುದೇ ವಿಶೇಷ ಎಂದರು. ಕಾರ್ಯದರ್ಶಿ ಮುರಳೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಶಿಕ್ಷಣದೊಟ್ಟಿಗೆ ಸಂಸ್ಕಾರ ಕೊಡುತ್ತಿರುವರಿಂದಲೇ ರಾಜ್ಯ- ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿ ಸಂತೋಷ ನೀಡುತ್ತಿದ್ದಾರೆ. ಶಾಲೆಯಂತೆಯೇ ಮನೆಮನೆಯಲ್ಲೂ ಸಂಸ್ಕಾರ ಬಿತ್ತರವಾಗಬೇಕೆಂಬ ಉದ್ದೇಶದಿಂದ ಮಾತೃಮಂಡಳಿ ಸ್ಥಾಪಿಸಿಕೊಂಡಿದ್ದೇವೆ. ಮಾತೃ ಮಂಡಳಿ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೂ ವೇದಿಕೆಯಾಗಬಹುದು ಎಂದರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ವಿಠ್ಠಲ ಆರ್. ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಸ್ಥ ರಮೇಶ ಪ್ರಭು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಪಿಯು ಪ್ರಾಚಾರ್ಯ ಕಿರಣ ಭಟ್ಟ, ಮುಖ್ಯ ಶಿಕ್ಷಕರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಗಣೇಶ ಜೋಶಿ, ಸಾವಿತ್ರಿ ಹೆಗಡೆ, ಮಾತೃಮಂಡಳಿಯ ಅಧ್ಯಕ್ಷರಾದ ಪೂಜಾ ಕಾಮತ, ಸ್ನೇಹಾ ಕಾಮತ, ಶ್ವೇತಾ ಭಟ್ಟ, ಪದಾಧಿಕಾರಿಗಳಾದ ಜ್ಯೋತಿ ನಾಯ್ಕ, ಭಾಗ್ಯಶ್ರೀ ನಾಯ್ಕ, ಸಂಜನಾ ಶೇಟ, ಗೀತಾ ನಾಯ್ಕ, ರಚನಾ ರೇವಣಕರ, ಯಶಸ್ವಿನಿ ನಾಯ್ಕ, ಶೈಲಾ ಗೌಡ, ಶೀತಲ ಭಂಡಾರಿ, ಪ್ರಜ್ಞಾ ಶಾನಭಾಗ ಇತರರು ಇದ್ದರು. ಚಿದಾನಂದ ಭಂಡಾರಿ, ಗೌರೀಶ ಭಂಡಾರಿ, ಆದರ್ಶ ರೇವಣಕರ ನಿರ್ವಹಿಸಿದರು. ನಾಗರಾಜ ಭಟ್ಟ ಪೂಜಾಕಾರ್ಯ ನೆರವೇರಿಸಿದರು.

Share this article