ಗದಗ: 21ನೇ ಶತಮಾನದಲ್ಲಿ ನಾವು ವೈಜ್ಞಾನಿಕ ಉತ್ತುಂಗ ತಲುಪಿದ್ದರೂ ಸಹ ಬಡತನ-ಭ್ರಷ್ಟಾಚಾರ, ಕೋಮುವಾದ-ಮೂಢನಂಬಿಕೆಗಳಂತ ತಲ್ಲಣಗಳು ನಮ್ಮನ್ನು ಇಂದಿಗೂ ಕಾಡುತ್ತಿದ್ದು, ಇವುಗಳಿಂದ ನಿವಾರಣೆ ಪಡೆಯಲು ಸಾಹಿತ್ಯ ಹಾಗೂ ಚಳವಳಿಗಳು ಜಂಟಿಯಾಗಿ ಸಾಗಬೇಕು ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಸದಸ್ಯೆ ಡಾ. ಜಯದೇವಿ ಗಾಯಕವಾಡ ಹೇಳಿದರು.
ಅವರು ನಗರದ ತೋಂಟದಾರ್ಯ ಮಠದ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ವತಿಯಿಂದ ಜರುಗಿದ ಪುಸ್ತಕ ಬಿಡುಗಡೆ ಹಾಗೂ ಕಾವ್ಯಯಾನ ಸಮಾರಂಭದಲ್ಲಿ ಡಾ.ಸದಾಶಿವ ದೊಡ್ಡಮನಿ ಬರೆದ ಇರುಳ ಬಾಗಿಲಿಗೆ ಕಣ್ಣ ದೀಪ ಹಾಗೂ ಮರುಳಸಿದ್ಧಪ್ಪ ದೊಡ್ಡಮನಿ ಬರೆದ ಎದೆಯಾಗಿನ ಮಾತು ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಡಾ. ಸದಾಶಿವ ದೊಡ್ಡಮನಿ ಬರೆದ ಕವನ ಸಂಕಲನ ವಿಸ್ಮಯಕಾರಿ ಕವಿತೆಗಳಿಂದ ಕೂಡಿದ್ದು, ಅವರು ಆಯ್ಕೆ ಮಾಡಿರುವ ವಿಷಯ ವಸ್ತುಗಳು ಅತ್ಯಂತ ಪ್ರಸ್ತುತವಾಗಿವೆ. ಕವಿತೆಗೆ ನೀಡಿರುವ ಶೀರ್ಷಿಕೆಗಳು ಆಕರ್ಷಣೀಯವಾಗಿದ್ದು, ಗಂಭೀರವಾದ ಕಾವ್ಯ ಶಕ್ತಿ ಅವರಿಗೆ ಒಲಿದಿದೆ. ಅದೇ ರೀತಿ ಗ್ರಾಮೀಣ ಸೊಗಡಿನ ಆಡು ಭಾಷೆಯಲ್ಲಿ ರಚಿತವಾಗಿರುವ ಮರುಳಸಿದ್ಧಪ್ಪ ದೊಡ್ಡಮನಿಯವರ ಶಾಯರಿ ಸಂಕಲನವು ಮನಸ್ಸಿಗೆ ಮುದ ನೀಡುವಂತಿದ್ದು, ಪ್ರೇಮ-ವಿರಹ ಮುಂತಾದ ಭಾವನೆ ಅಂದವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ದಸಾಪ ರಾಜ್ಯ ಘಟಕದ ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ ಮಾತನಾಡಿ, ಬದುಕು-ಭಾವನೆಗಳ ತೀವ್ರತೆ ಬಿತ್ತರಿಸುವ ಹೊಸತನ ತರುವುದು ಕನ್ನಡ ಕವಿಗಳ ಜಾಯಮಾನವಾಗಬೇಕು, ಈ ನಿಟ್ಟಿನಲ್ಲಿ ಯಶಸ್ವಿಯಾಗಿರುವ ಡಾ. ಸದಾಶಿವ ದೊಡ್ಡಮನಿಯವರ ಕಾವ್ಯಗಳು ಬದುಕಿನ ಸಂಕೀರ್ಣ ಅರ್ಥ ಬಿಡಿಸುತ್ತವೆ. ಕಾವ್ಯದಲ್ಲಿ ನಾವು ಏನು ಹೇಳುತ್ತಿದ್ದೇವೆ ಮುಖ್ಯವಲ್ಲ, ಆದರೆ ಹೇಗೆ ಹೇಳುತ್ತಿದ್ದೇವೆ ಎಂಬುದು ಮುಖ್ಯ. ಇರುಳಬಾಗಿಲಿಗೆ ಕಣ್ಣದೀಪ ಸಂಕಲನವು ಬದುಕಿನ ಕುರಿತು ತಾತ್ವಿಕ ಮೋಹ ಒದಗಿಸುವಂತಿದ್ದು, ಕೆಲವು ಕವಿತೆಗಳು ಬಂಡಾಯಕ್ಕೆ ಹೊಸ ಆಯಾಮ ನೀಡುವ ಜತೆಗೆ ಮಾನವ ಬಂಧುತ್ವದ ರೂಪಕಗಳಾಗಿ ಹೊರಹೊಮ್ಮಿವೆ. ಮರುಳಸಿದ್ಧಪ್ಪನವರ ಶಾಯರಿಗಳು ಸಹ ಸುಮಧುರವಾದ ಭಾವನೆ ಹಾಗೂ ಸಹಜಪ್ರಾಸದಿಂದ ಹೊರಹೊಮ್ಮಿವೆ ಎಂದರು.ಈ ವೇಳೆ ಕಲಬುರಗಿ ಜಿಲ್ಲೆಯ ಸಿರಿಗನ್ನಡ ವೇದಿಕೆಯ ಡಾ. ಗವಿಸಿದ್ಧಪ್ಪ ಪಾಟೀಲ, ದಸಾಪ ರಾಜ್ಯ ಘಟಕ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮಾತನಾಡಿದರು.
ಡಾ. ವಿನಾಯಕ ಕಮತದ, ಮಂಜುಳಾ ವೆಂಕಟೇಶಯ್ಯ, ಶಿಲ್ಪಾ ಮ್ಯಾಗೇರಿ, ಮಂಗಳಗೌರಿ ಹಿರೇಮಠ, ಭಾಗ್ಯಶ್ರೀ ಹುರಕಡ್ಲಿ, ಬಸವರಾಜ ನೆಲಜೇರಿ ಬಿಡುಗಡೆಯಾದ ಕವನ ಸಂಕಲನಗಳಲ್ಲಿನ ತಮ್ಮಿಷ್ಟದ ಕವಿತೆಗಳನ್ನು ವಾಚಿಸಿದರು. ಕವನ ಸಂಕಲನದ ಕರ್ತೃಗಳಾದ ಡಾ. ಸದಾಶಿವ ದೊಡ್ಡಮನಿ, ಮರುಳಸಿದ್ಧಪ್ಪ ದೊಡ್ಡಮನಿ ಕೃತಿಗಳ ಕುರಿತು ಮಾತನಾಡಿದರು.ದಸಾಪ ಅಭಿಮಾನಿಗಳು, ಕಾವ್ಯಾಸಕ್ತರು ಇದ್ದರು. ಕೃಷ್ಣಾ ಕಡಿಯವರ ಸಮತಾಗೀತೆ ಹಾಡಿದರು. ರತ್ನಾ ಅಂಗಡಿ, ಪೂಜಾ ಕುರಹಟ್ಟಿ ನಿರೂಪಿಸಿದರು. ಪ್ರಿಯಾಂಕಾ ಸುಣಗಾರ ವಂದಿಸಿದರು.