ಶಿರಸಿ: ಮಾಧ್ಯಮ ಕ್ಷೇತ್ರದಲ್ಲಿ ಇಂದು ಕೈ ಹಿಡಿದು ಬರೆಸಬಲ್ಲ, ಮಾರ್ಗದರ್ಶನ ನೀಡುವ ಹಿರಿಯರ ಕೊರತೆ ಸಾಕಷ್ಟಿದೆ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಡಾ.ನಿರಂಜನ ವಾನಳ್ಳಿ ಹೇಳಿದರು.ಅವರು ನಗರದ ಪಂಚವಟಿ ಸಭಾಂಗಣದಲ್ಲಿ ಶನಿವಾರ ಮನು ವಿಕಾಸ ಸಂಸ್ಥೆ ಹಾಗೂ ಸಾಹಿತ್ಯ ಪ್ರಕಾಶನ ಹಮ್ಮಿಕೊಂಡ ಪತ್ರಕರ್ತ ರಾಜು ಅಡಕಳ್ಳಿಯ ’ಸ್ಪೂರ್ತಿವಂತರು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಅಡಕಳ್ಳಿ ಅವರ ಕೃತಿ ಅಪರೂಪದ್ದಾಗಿದೆ. ಅವರು ಬಳಸುವ ಭಾಷೆ ಕೂಡ ಮಹತ್ವದ್ದಾಗಿದೆ. ಸ್ಥಳೀಯ ಸೊಗಡಿನದ್ದು ಎಂದ ವಾನಳ್ಳಿ, ಇಂದಿನ ಸಾಧಕರ ಜೊತೆಗೆ ಹಿಂದಿನ ಸಾಧಕರ ಪರಿಚಯ ಆಗಬೇಕು. ಮುಂದಿನ ತಲೆಮಾರಿಗೆ ಒಂದೊಳ್ಳೆ ಕೊಡುಗೆಯಾಗಿ ಈ ಕೃತಿ ಖಂಡಿತವಾಗಿ ಉಳಿಯುತ್ತದೆ ಎಂದರು.
ಕೃತಿ, ಲೇಖನ ಓದುವ ಸಂಪ್ರದಾಯದಿಂದ ನೋಡುವ ಸಂಪ್ರದಾಯಕ್ಕೆ ಬದಲಾಗಿದ್ದೇವೆ. ಕನ್ನಡ ಪತ್ರಿಕೋದ್ಯಮದಲ್ಲಿ ಕಾರ್ಯನಿರತರ ಕೊಡುಗೆ ಜೊತೆಗೆ ಹವ್ಯಾಸಿ ಲೇಖಕರ ಕೊಡುಗೆ ಕೂಡ ಇದೆ ಎಂದರು.ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ರಾಜು ಅಡಕಳ್ಳಿ ಈ ಕೃತಿ ಕೂಡ ಓದುವ ಹಂಬಲ ಹೆಚ್ಚಿಸಿದೆ ಎಂದರು.
ಕೃತಿಕಾರ ರಾಜು ಅಡಕಳ್ಳಿ ಮಾತನಾಡಿ, ಕೃತಿ ಬಿಡುಗಡೆ ಎಂದರೆ ನಾಮಕರಣ ಮಾಡುವ ಕಾಲ ಘಟ್ಟ. ಮನೆಯಲ್ಲಿ ಕುಬೇರ ಮೂಲೆ ಇದ್ದಂತೆ, ಸರಸ್ವತಿ ಮೇಲೆಯೂ ನಿರ್ಮಾಣ ಮಾಡಬೇಕು. ಆ ಮೂಲಕ ಸರಸ್ವತಿ ಪೂಜೆಯ ಆರಾಧಿಸೋಣ ಎಂದರು.
ಮನುವಿಕಾಸ ಸಂಸ್ಥೆ ಅಧ್ಯಕ್ಷ ಗಣಪತಿ ಭಟ್ಟ ಅಧ್ಯಕ್ಷತೆ ವಹಿಸಿ,ಎಲ್ಲರನ್ನು, ಎಲ್ಲ ಕ್ಷೇತ್ರವನ್ನು ಮುನ್ನೆಲೆಗೆ ತರುವ ಕಾರ್ಯ ಅಡಕಳ್ಳಿ ಅವರ ಕಾರ್ಯ ಮಾಡುತ್ತಿದ್ದಾರೆ ಎಂದರು.