ಮನುಷ್ಯ ಸ್ವಾರ್ಥ ಕೈಬಿಟ್ಟು ಸಂಸ್ಕೃತಿ ಮೈಗೂಡಿಸಿಕೊಳ್ಳಲಿ: ಜಗ್ಗೇಶ

KannadaprabhaNewsNetwork |  
Published : Feb 15, 2024, 01:34 AM IST
ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯ ಜಗ್ಗೇಶ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಅನಾಥ ಮಕ್ಕಳ ಬದುಕಿಗೆ ಆಸರೆಯಾಗಿ ನಿಲ್ಲುವ ಮೂಲಕ ಅವರಿಗೆ ತಾಯಿಯ ಪ್ರೀತಿ, ವಾತ್ಸಲ್ಯ ನೀಡುವ ಕಾರ್ಯ ಕೈಗೊಳ್ಳುತ್ತಿರುವ ಸಂಘದ ಕಾರ್ಯ ಅಭಿನಂದನಾರ್ಹ ರಾಜ್ಯಸಭಾ ಸದಸ್ಯ ಜಗ್ಗೇಶ ಹೇಳಿದರು.

ಹುಬ್ಬಳ್ಳಿ: ಮನುಷ್ಯ ಸಂಗ ಜೀವಿಯಾಗುವ ಮೂಲಕ ನಮ್ಮ ನಾಡಿನ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗ ಮುಂಬರುವ ಪೀಳಿಗೆಗೆ ಜೀವನದ ಮಾರ್ಗದರ್ಶನ ನೀಡಲು ಸಾಧ್ಯ ಎಂದು ಚಲನಚಿತ್ರ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ ಹೇಳಿದರು.

ಬುಧವಾರ ಸಂಜೆ ಸೇವಾಭಾರತಿ ಟ್ರಸ್ಟ್, ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ವತಿಯಿಂದ ನಗರದ ಸೇವಾ ಸದನ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಲಕಲ್ಯಾಣ ಕೇಂದ್ರದ ಮಕ್ಕಳ ಸಾಮೂಹಿಕ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಲ್ಲಿನ ಮಕ್ಕಳನ್ನು ನೋಡಿದಾಗ ದೇವರ ಬಗ್ಗೆ ಭಕ್ತಿ ಹೆಚ್ಚಿತು. ಅನಾಥ ಮಕ್ಕಳ ಬದುಕಿಗೆ ಆಸರೆಯಾಗಿ ನಿಲ್ಲುವ ಮೂಲಕ ಅವರಿಗೆ ತಾಯಿಯ ಪ್ರೀತಿ, ವಾತ್ಸಲ್ಯ ನೀಡುವ ಕಾರ್ಯ ಕೈಗೊಳ್ಳುತ್ತಿರುವ ಸಂಘದ ಕಾರ್ಯ ಅಭಿನಂದನಾರ್ಹ ಎಂದರು.

ದೇವರಿಗೆ ಎಲ್ಲೆಡೆಯೂ ಇರಲು ಆಗುವುದಿಲ್ಲ ಎಂಬ ಕಾರಣಕ್ಕಾಗಿಯೇ ತಾಯಿಯನ್ನು ಸೃಷ್ಟಿ ಮಾಡಿದ್ದಾನೆ. ತಾಯಿ ಎಷ್ಟು ಅದ್ಭುತ ಎಂದರೆ ದೇವರ ಪ್ರತಿರೂಪವಾಗಿ ತಾಯಿ ಇರುತ್ತಾಳೆ. ಅವಳಿಗೆ ತನ್ನ ಕಂದ ಏನು ಮಾಡಿದರೂ ಪ್ರೀತಿಯೇ, ಅದಕ್ಕೆ ಹೇಳುವುದು ತಾಯಿಯ ವಾತ್ಸಲ್ಯ ಎಂದು. ಇಂತಹ ತಾಯಿಯ ವಾತ್ಸಲ್ಯ ಪಡೆಯುತ್ತಿರುವ ಸೇವಾಭಾರತಿಯಲ್ಲಿರುವ ಮಕ್ಕಳೇ ನಿಜವಾದ ಅದೃಷ್ಟವಂತರು ಎಂದರು.

ನೋಡಿ ಕಲಿತುಕೊಳ್ಳಿ

ಸಂಘ ಪರಿವಾರದ ಬಗ್ಗೆ ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಅವರು ಬಂದು ಸಂಘದ ಚಟುವಟಿಕೆಗಳನ್ನು ನೋಡಿ ಮಾತನಾಡಲಿ. ಸಂಘ ವ್ಯಕ್ತಿಯನ್ನು ನಿರ್ಮಾಣ ಮಾಡುತ್ತದೆ. ಇದಕ್ಕೆ ಮುಖ್ಯ ಉದಾಹರಣೆಯೇ ಈ ಬಾಲಕಲ್ಯಾಣ ಕೇಂದ್ರ. ಪ್ರಧಾನಿ ನರೇಂದ್ರ ಮೋದಿ ಅವರೂ ಜನಸಂಘದಿಂದ ಬಂದವರು. ಅವರ ಕೆಲಸ ಕಾರ್ಯಗಳು, ಅವರ ದಿಟ್ಟ ನಿಲುವು, ಆದರ್ಶಪ್ರಾಯ ಕಾರ್ಯಗಳು ಅವರಲ್ಲಿ ಬಂದಿರುವುದು ಈ ಜನಸಂಘದಿಂದಲೇ. ಇದು ವ್ಯಕ್ತಿಯಲ್ಲಿ ಶಿಸ್ತು, ಕಲಿಕಾಸಕ್ತಿ, ಬೇರೊಬ್ಬರನ್ನು ಗೌರವಿಸುವುದನ್ನು ಕಲಿಸುತ್ತದೆ. ಇದನ್ನು ನೋಡಿ ಇತರರು ಕಲಿತುಕೊಳ್ಳಲಿ ಎಂದರು.

ಸ್ವಾರ್ಥಿಗಳಾಗಬೇಡಿ

ನಾವು ಸ್ವಾರ್ಥಿಗಳು, ಬೆಳೆಯುತ್ತಾ ಬೆಳೆಯುತ್ತಾ ಹೋದಂತೆ ನಾವು, ನಮ್ಮ ಕುಟುಂಬ ಎಂಬುದನ್ನೇ ಮರೆಯುತ್ತಿದ್ದೇವೆ. ಮೊದಲು ಸ್ವಾರ್ಥದ ಬದುಕನ್ನು ಕೈಬಿಟ್ಟು ನಮ್ಮ ಸಮಾಜ, ಪರಿಸರದ ಬಗ್ಗೆ ನಾವು ಮೊದಲು ಕಾಳಜಿ ವಹಿಸಬೇಕು. ನಾವೆಲ್ಲರೂ ಸಮಾಜದೊಂದಿಗೆ ಬೆರೆಯುವ ಮನೋಭಾವ ಬೆಳೆಸಿಕೊಳ್ಳಬೇಕು.

ಸಮಾಜದೊಂದಿಗೆ ಬೆರೆತುಕೊಳ್ಳಿ

ಇಂದು ಮನುಷ್ಯರು ತಾಂತ್ರಿಕತೆಗೆ ದಾಸರಾಗುತ್ತಿದ್ದಾರೆಯೇ ಹೊರತು ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಇದು ದುರ್ದೈವದ ಸಂಗತಿ. ಮೊದಲು ತಾಂತ್ರಿಕತೆಯ ಸದ್ಬಳಕೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಯುವಜನತೆ ಅರಿತುಕೊಳ್ಳಬೇಕಿದೆ. ಈ ಮೂಲಕ ಟಿವಿ, ಮೊಬೈಲ್‌ ಗೀಳು ಕೈಬಿಟ್ಟು ಹಿರಿಯರ, ಸಮಾಜದೊಂದಿಗೆ ಬೆರೆಯುವ ಕಾರ್ಯ ಮಾಡಿ ಎಂದು ಸಲಹೆ ನೀಡಿದರು.

ಬಾಲ ಕಲ್ಯಾಣ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ವೇಳೆ ಸಾಮೂಹಿಕ ಆರತಿ ಹಾಗೂ ಜನ್ಮದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ, ಉದ್ಯಮಿ ವಿಷ್ಣು ಮೆಹರವಾಡೆ, ರತ್ನಾ ಮಾತಾಜಿ, ಡಾ. ರಘು ಅಕಮಂಜಿ, ವೀಣಾ ಮಳಿಯೆ, ಸೇವಾಭಾರತಿ ಟ್ರಸ್ಟ್‌ನ ಅಧ್ಯಕ್ಷ ಪೂರ್ಣಚಂದ್ರರಾವ್ ಘಂಟಸಾಲ, ಭಾರತಿ ನಂದಕುಮಾರ, ಉಮಾ ಮುಕುಂದ, ಸುಲೋಚನ ನಾಯ್ಕ ಸೇರಿದಂತೆ ಹಲವರಿದ್ದರು.

ಜೈ ಶ್ರೀರಾಮ್‌ ಎನ್ನಿ

ಮಕ್ಕಳು ಇಂದು ಹಿರಿಯರಿಗೆ ಗೌರವ ನೀಡುವುದು ಕಡಿಮೆಯಾಗುತ್ತಿದೆ. ಎಲ್ಲ ಮಕ್ಕಳು ಈಗ ಹಾಯ್, ಹಲೋ, ಗುಡ್‌ ಮಾರ್ನಿಂಗ್‌, ಗುಡ್‌ನೈಟ್‌, ಬೈ ಬೈ, ಟಾಟಾ ಎನ್ನುತ್ತಿದ್ದಾರೆ. ಮೊದಲು ಈ ಸಂಸ್ಕೃತಿಯನ್ನು ಕೈಬಿಟ್ಟು ಇನ್ನು ಮುಂದೆ ಯಾರೇ ಭೇಟಿಯಾಗಲಿ ಅವರಿಗೆ ಜೈ ಶ್ರೀರಾಮ್‌ ಎನ್ನಿರಿ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?