ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವ ಮಾದರಿಯಲ್ಲೇ ಕೊಡಗಿನ ಸಣ್ಣ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಆರ್. ಮಾಧವರೆಡ್ಡಿ ಕರೂರು ಒತ್ತಾಯಿಸಿದರು.ಹುಬ್ಬಳ್ಳಿಯಿಂದ ಹೊರಟಿರುವ ರೈತ ಸಂಕಲ್ಪ ಜಾಥಾ ಬುಧವಾರ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕೊಡಗಿನಲ್ಲಿ ರೈತರೆ ಕಾಫಿ ಬೆಳೆಯುತ್ತಿದ್ದಾರೆ. ವಾಣಿಜ್ಯ ಬೆಳೆಯೆಂದು ಸರ್ಕಾರ ತಾರಾತಮ್ಯ ಮಾಡಬಾರದು. ದೇಶದ ರೈತರೆಲ್ಲರೂ ಒಂದೇ, ಪ್ರತಿಯೊಬ್ಬ ರೈತರು ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲಗಾರರಾಗಿದ್ದಾರೆ. ಬ್ಯಾಂಕ್‍ಗಳ ಬಡ್ಡಿ, ಚಕ್ರಬಡ್ಡಿ ವಿಧಿಸುತ್ತ ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು.ಸರ್ಕಾರಕ್ಕೆ ಯಥೇಚ್ಚವಾದ ಸಂಪನ್ಮೂಲವಿದೆ. ರೈತರ ಎಲ್ಲ ಬೇಡಿಕೆಗಳನ್ನು ಒಂದೇ ವಾರದಲ್ಲಿ ಪೂರೈಸಬಹುದು. ಉದ್ಯಮಿಗಳ ಲಕ್ಷ ಲಕ್ಷ ಕೋಟಿ ರು. ಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿ ಕೃಷಿಚಟುವಟಿಕೆಗಾಗಿ ರೈತರು ಸಾಲ ಪಡೆದಿದ್ದಾರೆ. ಸಾಲದ ಮೇಲೆ ಬಡ್ಡಿ, ಚಕ್ರಬಡ್ಡಿ ಹಾಕುತ್ತಿದ್ದಾರೆ. ಸಾಲ ಮರುಪಾವತಿ ಮಾಡದವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತಿದ್ದಾರೆ. ಸಾಲಕ್ಕಿಂತ 4 ಪಟ್ಟು ಜಾಸ್ತಿ ಹಣವನ್ನು ಮರುಪಾವತಿಸಲು ನೊಟೀಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬ್ಯಾಂಕ್‍ನ ಕಿರುಕುಳದಿಂದ ಘಾಸಿಗೊಂಡಿರುವ ಅನ್ನದಾತರಿಗೆ ಆತ್ಮವಿಶ್ವಾಸ ತುಂಬುವುದೇ ಜಾಥಾದ ಉದ್ದೇಶವಾಗಿದ್ದು, ಮಾ. 28ರಂದು ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು, ಸಾಲಗಾರ ರೈತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೊಡಗಿನ ರೈತರು ಅಧಿಕ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.ಕೇಂದ್ರ ಸರ್ಕಾರ ಸಾಲ ವಸೂಲಿ ನ್ಯಾಯಮಂಡಳಿ ಸ್ಥಾಪಿಸಿ, ಅನ್ನ ನೀಡುವ ರೈತನ ಮೇಲೆ ಕಾನೂನು ಪ್ರಯೋಗ ಮಾಡುತ್ತಿರುವುದು ಖಂಡನೀಯ ಎಂದು ದೂರಿದರು.ಕಾಫಿ ಬೆಳೆಗಾರರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲೇಬೇಕೆಂದು ರೈತ ಸಂಘ ನಿರಂತರ ಹೋರಾಟ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಉಚಿತ ವಿದ್ಯುತ್ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಅದರ ಸೌಲಭ್ಯ ಬೆಳೆಗಾರರಿಗೆ ಇದುವರೆಗೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮಂಡಿಸುವ ಬಜೆಟ್‍ನಲ್ಲಿ ಉಚಿತ ವಿದ್ಯುತ್ ಹಾಗು ಬೆಳೆಗಾರರ ಪಂಪ್‍ಸೆಟ್‍ಗಳಿಗೆ ಉಪಯೋಗಿಸಿದ ವಿದ್ಯುತ್ ಬಿಲ್ ಬಾಕಿಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಸರ್ಕಾರದ ವಿರುದ್ಧ ರೈತ ಸಂಘದಿಂದ ನಿರಂತರ ಚಳುವಳಿ ರೂಪಿಸಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹೇಳಿದರು.ಕೊಡಗು ಕೂಡ ಕರ್ನಾಟಕ ರಾಜ್ಯದೊಳಗೆ ಇರುವುದು. ಇಲ್ಲಿರುವ ರೈತರು ಕೂಡ ಕಾಫಿ ಬೆಳೆಯುತ್ತಿದ್ದಾರೆ. ಬರಗಾಲ, ಅಕಾಲಿಕ ಮಳೆಯಿಂದ ಶೇ.60ರಷ್ಟು ಕಾಫಿ ಫಸಲು ಹಾನಿಯಾಗಿದೆ. ಕಾಫಿ ತೋಟಗಳು ರೋಗಪೀಡಿತವಾಗಿವೆ. ಪ್ರತಿವರ್ಷ ಅಕಾಲಿಕ ಮಳೆಯಿಂದ ಫಸಲು ಹಾನಿಯಾಗುತ್ತಿದೆ. ನಿಗದಿತ ಸಮಯದಲ್ಲಿ ಹೂ ಮಳೆ ಬೀಳುತ್ತಿಲ್ಲ. ಪಂಪ್‍ಸೆಟ್‍ಗಳ ಮೂಲಕ ನೀರು ಹಾಯಿಸಿ ಕಾಫಿ ಉತ್ಪಾದನೆ ಮಾಡಬೇಕಿದೆ. ಉಚಿತ ವಿದ್ಯುತ್ ನೀಡಿದರೆ ಕಾಫಿ ಉತ್ಪಾದನೆ ಹೆಚ್ಚುತ್ತದೆ. ತೆರಿಗೆ ಮತ್ತು ವಿದೇಶಿ ವಿನಿಮಯದಿಂದ ಕೋಟ್ಯಾಂತರ ರು. .ನಷ್ಟು ಆದಾಯ ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಬರುತ್ತದೆ. ಈ ಬಜೆಟ್‍ನಲ್ಲಾದರೂ ಯಾವುದೇ ಷರತ್ತುಗಳಿಲ್ಲದೆ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರಿ ಆದೇಶ ಹೊರಡಿಸಬೇಕು. ವಿದ್ಯುತ್ ಬಾಕಿ ಮನ್ನಾ ಮಾಡಬೇಕು ಎಂದು ಸಂಘದ ಉಪಾಧ್ಯಕ್ಷ ಜಿ. ಎಂ. ಹೂವಯ್ಯ ಹೇಳಿದರು. ದೇಶದಲ್ಲಿ ರೈತರ ಹೋರಾಟ ತೀವ್ರಗೊಂಡಿದ್ದು, ಕಾಫಿಗೂ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.ಜಿಲ್ಲೆಯ ಸಹಕಾರ ಸಂಘಗಳಲ್ಲಿ ಸರ್ಕಾರಿ ನಿಯಮವನ್ನು ಮೀರಿ ಬಡ್ಡಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಂಘದ ಸಂಚಾಲಕ ಲಕ್ಷ್ಮಣ್ ದೂರಿದರು. ಶೇ.3ರಷ್ಟು ಬಡ್ಡಿಗೆ ಕೃಷಿ ಸಾಲ ನೀಡಬೇಕೆಂಬ ನಿಯಮವಿದೆ. ಆದರೆ ಇವತ್ತಿಗೂ ಶೇ.8, 10ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ದೂರಿದರು.ಗೋಷ್ಠಿಯಲ್ಲಿ ರೈತ ಮುಖಂಡ ಮಸಗೋಡು ಸುರೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.