ಲಕ್ಷಾಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸು: ಸಂಸದ ಕ್ಯಾ. ಚೌಟ

KannadaprabhaNewsNetwork |  
Published : Nov 15, 2024, 12:37 AM IST
ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ  | Kannada Prabha

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪಿಎಂ ವಿದ್ಯಾಲಕ್ಷ್ಮಿ ಎನ್ನುವ ಬಹಳ ಉಪಯುಕ್ತ ಯೋಜನೆಗೆ ಅನುಮೋದನೆ ನೀಡಿರುವುದಕ್ಕೆ ಸಂಸದರು ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರ ಪ್ರಾರಂಭಿಸುತ್ತಿರುವ ಹೊಸ ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹು ದೊಡ್ಡ ವರದಾನವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪಿಎಂ ವಿದ್ಯಾಲಕ್ಷ್ಮಿ ಎನ್ನುವ ಬಹಳ ಉಪಯುಕ್ತ ಯೋಜನೆಗೆ ಅನುಮೋದನೆ ನೀಡಿರುವುದಕ್ಕೆ ಸಂಸದರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ರಾಷ್ಟ್ರೀಯ ಶಿಕ್ಷಣ ನೀತಿಯ ಮತ್ತೊಂದು ಪ್ರಮುಖ ಕೊಡುಗೆಯಾಗಿದೆ. ಈ ಯೋಜನೆಯಡಿ ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಬಡ ಕುಟುಂಬಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವುದಕ್ಕೆ ಸುಲಭ ಹಾಗೂ ತ್ವರಿತಗತಿಯಲ್ಲಿ ಹಣಕಾಸಿನ ನೆರವು ಲಭ್ಯವಾಗಲಿದೆ. ಆ ಮೂಲಕ ಪಿಎಂ ವಿದ್ಯಾಲಕ್ಷ್ಮಿ ಯೋಜನೆಯು ಪ್ರತಿವರ್ಷವೂ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸು ನನಸಾಗಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಪಿಎಂ ವಿದ್ಯಾಲಕ್ಷ್ಮಿ ಯೋಜನೆಯಡಿ ವಾರ್ಷಿಕ 8 ಲಕ್ಷ ರು. ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ 7.5 ಲಕ್ಷ ರು. ವರೆಗೆ ಬ್ಯಾಂಕ್‌ಗಳಿಂದ ಯಾವುದೇ ಭದ್ರತೆಯಿಲ್ಲದೆ(ಕೊಲಾಟರಲ್‌ ರಹಿತ) ಸಾಲ ನೀಡಲಾಗುತ್ತದೆ. ಈ ಸಾಲದ ಶೇ.75ರಷ್ಟು ಮೊತ್ತಕ್ಕೆ ಸರ್ಕಾರವೇ ಬ್ಯಾಂಕ್‌ಗಳಿಗೆ ಖಾತರಿ ನೀಡಲಿದೆ. ಅಲ್ಲದೆ 8 ಲಕ್ಷ ರು. ಗಿಂತ ಅಧಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರು.ವರೆಗೆ ಸಾಲ ನೀಡಲಿದ್ದು, ಅದಕ್ಕೆ ಶೇ.3ರಷ್ಟು ಬಡ್ಡಿ ವಿನಾಯಿತಿ ಕೂಡ ದೊರೆಯಲಿದೆ. ಶೀಘ್ರದಲ್ಲೇ ದೇಶದೆಲ್ಲೆಡೆ ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಅರ್ಹ ವಿದ್ಯಾರ್ಥಿಗಳು ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಹೊಸ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ