ಚಿಕ್ಕಬಳ್ಳಾಪುರ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನರವರು ಒಕ್ಕಲಿಗ ಮತ್ತು ದಲಿತ ಸಮುದಾಯವನ್ನು ನಿಂದನೆ ಮಾಡಿರುವುದಕ್ಕೆ ಸಮುದಾಯದ ಕ್ಷಮೆ ಕೇಳಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್. ರಮೇಶ್ ಆಗ್ರಹಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸಮಾನ ಮನಸ್ಕ ಒಕ್ಕಲಿಗರು ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಶಾಸಕ ಮುನಿರತ್ನ, ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೆಲ ಬಿಜೆಪಿಯವರು ಯಾವ್ಯಾವುದೋ ವಿಚಾರ ಮಾತನಾಡುತ್ತಾರೆ. ಬದ್ಧತೆ ಇದ್ದರೆ, ಈ ವಿಚಾರಕ್ಕೆ ಉತ್ತರ ಕೊಡಲಿ. ಒಕ್ಕಲಿಗ ಸಮುದಾಯದ ನಾಯಕರೇ ಆದ ಅಶೋಕ್ ಮತ್ತು ಸಿ.ಟಿ. ರವಿ ಈ ಶಾಸಕನನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇವರು ಒಕ್ಕಲಿಗರಾ? ಎಂದು ಅನುಮಾನ ವ್ಯಕ್ತವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಮುನಿರತ್ನ ಅಲ್ಲ ಮನಿರತ್ನನಾಗಿದ್ದಾನೆ. ಆಂಧ್ರದ ಚಿತ್ತೂರಿನಿಂದ ಈತನ ತಂದೆ ಸುಭ್ರಮಣ್ಯ ನಾಯ್ಡು ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡಲು ಬೆಂಗಳೂರಿಗೆ ಬಂದವರು. ಅಂದು ತಂದೆಯ ಜೊತೆ ಮುನಿರತ್ನ ಮತ್ತು ಸಹೋದರ ಕೊರಂಗು ಕೃಷ್ಣ ಗಾರೆ ಕೆಲಸ ಮಾಡುತ್ತಿದ್ದವರು, ತಮ್ಮ ರೌಡಿಯಾದ ಈತ ರಾಜಕಾರಣಕ್ಕೆ ಬಂದ. ಮೂರು ಬಾರಿ ಶಾಸಕ, ಒಂದು ಬಾರಿ ಮಂತ್ರಿಯೂ ಆಗಿದ್ದ ಮುನಿರತ್ನ ಲಂಚಕ್ಕಾಗಿ ಗುತ್ತಿಗೆದಾರರನ್ನು ಪೀಡಿಸುವ ಜೊತೆಗೆ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತಾಡಿದ್ದಾರೆ. ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. ಜೊತೆಗೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರನ ಬಳಿ ಮಾತನಾಡುವಾಗ ಕೊಲೆ ಬೆದರಿಕೆ, ಲಂಚಕ್ಕೆ ಬೇಡಿಕೆ ಇಡುವಾಗ ಪರಿಶಿಷ್ಟ ಸಮುದಾಯದ ಬಗ್ಗೆ ಆಡಿದ್ದಾರೆ ಎನ್ನಲಾದ ಮಾತುಗಳು ನೋವು ಹಾಗೂ ಆಕ್ರೋಶ ತರಿಸಿವೆ. ಶಾಸಕ ಮುನಿರತ್ನ ಅವರ ಈ ನಡೆಯನ್ನು ಪಕ್ಷಾತೀತವಾಗಿ ಖಂಡಿಸಬೇಕು. ಅದುಬಿಟ್ಟು ಆತನನ್ನು ಸಮರ್ಥಿಸಿಕೊಳ್ಳುವುದು ಸಮುದಾಯ ಮತ್ತು ಮಹಿಳೆಯರಿಗೆ ಮಾಡುವ ಮಹಾದ್ರೋಹವಾಗಿದೆ. ಅವರನ್ನು ಶಿಕ್ಷಿಸದಿದ್ದರೆ ತೀವ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಕೆ ನೀಡಿದರು.ಒಕ್ಕಲಿಗ ಮುಖಂಡ ಪುರದಗಡ್ಡೆ ಕೃಷ್ಣಪ್ಪ ಮಾತನಾಡಿ, ಮುನಿರತ್ನರವರು ಚಲುವರಾಜು ಎಂಬ ಗುತ್ತಿಗೆದಾರರ ಬಳಿ ತಮ್ಮ ವೈಯಕ್ತಿಕ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾಗ ಒಕ್ಕಲಿಗ ಮತ್ತು ದಲಿತ ಸಮುದಾಯದ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಮುನಿರತ್ನ ಅವರ ಮಾತುಗಳು ಸಮಾಜದ ಭಾವನೆಗಳಿಗೆ ಧಕ್ಕೆ ತಂದಿವೆ. ಸಮಾಜದ ಹೆಣ್ಣು ಮಕ್ಕಳ ಭಾವನೆಗಳನ್ನು ಗಾಸಿಗೊಳಿಸಿವೆ. ಜಾತಿ ನಿಂದನೆ ಪ್ರಕರಣದಲ್ಲೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗ ಮುಖಂಡರಾದ ಚಂದ್ರಣ್ಣ, ಲಕ್ಷ್ಮಣ್, ವಸಂತ್, ಮಂಜುನಾಥ್, ಮಧುಸೂಧನ್ ಮತ್ತಿತರರು ಇದ್ದರು.