ಪವರ್‌ ಲಿಫ್ಟಿಂಗ್‌ಗೆ ಯುವಕರು ಹೆಚ್ಚೆಚ್ಚು ಬರಲಿ

KannadaprabhaNewsNetwork |  
Published : Apr 27, 2026, 02:00 AM IST
ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ವತಿಯಿಂದ ಇದೇ ಮೊದಲ ಬಾರಿಗೆ ನಗರದಲ್ಲಿ ರಾಜ್ಯಮಟ್ಟದ ಮುಕ್ತ ಹಾಗೂ ಬಾಲಕ- ಬಾಲಕಿಯರ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ಯುಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್-2026 ಅನ್ನು ಅತ್ಯುತ್ತಮವಾಗಿ  ಆಯೋಜಿಸಲಾಗಿದೆ  | Kannada Prabha

ಸಾರಾಂಶ

ಪವರ್‌ಲಿಫ್ಟಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಅನೇಕರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಪವರ್‌ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಾವಕಾಶಗಳು ಖಂಡಿತ ಸಿಗುತ್ತವೆ. ರಾಜ್ಯ ಸರ್ಕಾರದಿಂದ ಕ್ರೀಡಾಪಟುಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 2ರಷ್ಟು ಮೀಸಲಾತಿ ಸೌಲಭ್ಯ ಇರುವುದರಿಂದ ಈ ಕ್ಷೇತ್ರದ ಭವಿಷ್ಯ ಇನ್ನಷ್ಟು ಉಜ್ವಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸರಿಯಾದ ತರಬೇತಿ, ಶಿಸ್ತು ಮತ್ತು ಪ್ರೋತ್ಸಾಹ ದೊರೆತರೆ ಹಾಸನ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಬಹುದು. ಯುವಕರು ಹೆಚ್ಚು ಸಂಖ್ಯೆಯಲ್ಲಿ ಈ ಕ್ರೀಡೆಗೆ ಬರಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ವತಿಯಿಂದ ಇದೇ ಮೊದಲ ಬಾರಿಗೆ ನಗರದಲ್ಲಿ ರಾಜ್ಯಮಟ್ಟದ ಮುಕ್ತ ಹಾಗೂ ಬಾಲಕ- ಬಾಲಕಿಯರ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ಯುಪ್ಡ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್-2026 ಅನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ ಎಂದು ಪವರ್ ಲಿಫ್ಟಿಂಗ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಹಾಸನ ಜಿಲ್ಲಾ ಪವರ್‌ಲಿಫ್ಟಿಂಗ್ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ರಾಜ್ಯ ಮಟ್ಟದ ಮುಕ್ತ ಹಾಗೂ ಬಾಲಕ-ಬಾಲಕಿಯರ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ಯುಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಕೆ. ಹನುಮಂತೇಗೌಡ ಮತ್ತು ಎಲ್ಲಾ ಪದಾಧಿಕಾರಿಗಳ ಶ್ರಮದಿಂದ ಈ ಮಟ್ಟದ ಸ್ಪರ್ಧೆ ಹಾಸನದಲ್ಲಿ ಸಾಧ್ಯವಾಗಿದೆ ಎಂದರು. ಎರಡು ದಿನಗಳ ಕಾಲ ನಿರಂತರವಾಗಿ ನಡೆಯಲಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನ ಕ್ಲಾಸಿಕ್ ವಿಭಾಗದ ಎಲ್ಲಾ ಸ್ಪರ್ಧೆಗಳು ನಡೆಯಲಿದ್ದು, ಭಾನುವಾರ ಎಕ್ಯುಪ್ಡ್ ಪವರ್‌ಲಿಫ್ಟಿಂಗ್ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.ಪವರ್ ಲಿಫ್ಟಿಂಗ್ ಇಂದು ವಿಶ್ವದ 156 ದೇಶಗಳಲ್ಲಿ ಮಾನ್ಯತೆ ಪಡೆದ ಕ್ರೀಡೆಯಾಗಿದೆ. ಈಗ ಎಲ್ಲ ಜಿಮ್ನಾಸಿಯಂಗಳು ಹಾಗೂ ಸಾಮಾನ್ಯ ಜಿಮ್‌ಗಳಲ್ಲಿಯೂ ಪವರ್ ಲಿಫ್ಟಿಂಗ್ ಅಭ್ಯಾಸ ಮಾಡುವ ಕ್ರೀಡಾಪಟುಗಳು ಕಂಡು ಬರುತ್ತಿದ್ದಾರೆ. ಕರ್ನಾಟಕದ ಕ್ರೀಡಾಪಟುಗಳು ಪ್ರತಿಬಾರಿಯೂ ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ರಾಜ್ಯದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಅನೇಕರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಪವರ್‌ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಾವಕಾಶಗಳು ಖಂಡಿತ ಸಿಗುತ್ತವೆ. ರಾಜ್ಯ ಸರ್ಕಾರದಿಂದ ಕ್ರೀಡಾಪಟುಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 2ರಷ್ಟು ಮೀಸಲಾತಿ ಸೌಲಭ್ಯ ಇರುವುದರಿಂದ ಈ ಕ್ಷೇತ್ರದ ಭವಿಷ್ಯ ಇನ್ನಷ್ಟು ಉಜ್ವಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸರಿಯಾದ ತರಬೇತಿ, ಶಿಸ್ತು ಮತ್ತು ಪ್ರೋತ್ಸಾಹ ದೊರೆತರೆ ಹಾಸನ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಬಹುದು. ಯುವಕರು ಹೆಚ್ಚು ಸಂಖ್ಯೆಯಲ್ಲಿ ಈ ಕ್ರೀಡೆಗೆ ಬರಬೇಕು ಎಂದು ಕರೆ ನೀಡಿದರು.ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಗೆಲುವು ಮತ್ತು ಸೋಲು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಇರಬೇಕು. ಮೊದಲಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಧೈರ್ಯ ಮುಖ್ಯ. ಪವರ್ ಲಿಫ್ಟಿಂಗ್ ಹೆಸರೇ ಹೇಳುವಂತೆ ದೈಹಿಕ ಹಾಗೂ ಮಾನಸಿಕ ಶಕ್ತಿ ಬೇಕಾಗುತ್ತದೆ. ಅಂತಹ ಶಕ್ತಿ ಇರುವವರೇ ಇಲ್ಲಿ ಬಂದಿದ್ದೀರಿ. ನಿಮಗೆ ಮೊದಲಿಗೆ ಅಭಿನಂದನೆಗಳು ಎಂದರು. ಹಾಸನದಲ್ಲಿಯೂ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ ಎಂಬುದನ್ನು ಈ ಸ್ಪರ್ಧೆ ಸಾಬೀತುಪಡಿಸಿದೆ. ಈಗ ಜೂನಿಯರ್ ವಿಭಾಗದಲ್ಲಿ ಭಾಗವಹಿಸುತ್ತಿರುವವರು ಮುಂದಿನ ದಿನಗಳಲ್ಲಿ ಸೀನಿಯರ್ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವ ಮಟ್ಟಕ್ಕೆ ಬೆಳೆಯಬೇಕು ಎಂದು ಪ್ರೋತ್ಸಾಹ ನೀಡಿದರು.ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಅಪಾರ ಉತ್ಸಾಹದಿಂದ ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನ ನೀಡಿದರು. ಭಾರ ಎತ್ತುವ ಸ್ಪರ್ಧೆಯಲ್ಲಿ ಶಿಸ್ತು, ಶಕ್ತಿ ಮತ್ತು ಆತ್ಮವಿಶ್ವಾಸ ಸ್ಪಷ್ಟವಾಗಿ ಗೋಚರಿಸಿತು. ಕಾರ್ಯಕ್ರಮಕ್ಕೂ ಮೊದಲು ವಿಶೇಷ ಪೂಜೆ ಸಲ್ಲಿಸಲಾಯಿತು. ಪವರ್ ಲಿಫ್ಟಿಂಗ್‌ಗೆ ಅಗತ್ಯವಿರುವ ಪರಿಕರಗಳನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಕ್ರೀಡಾಪಟುಗಳ ತರಬೇತಿ ಹಾಗೂ ಸ್ಪರ್ಧೆಗೆ ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪವರ್‌ ಲಿಫ್ಟಿಂಗ್ ಸಂಸ್ಥೆಯ ಪೋಷಕ ನಿರಂಜನ್ ರಾಜ್, ಸಂಸ್ಥೆ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಕೆ. ಹನುಮಂತೇಗೌಡ, ಖಜಾಂಚಿ ಅಶ್ವತ್, ಸಹ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಉಪಾಧ್ಯಕ್ಷರಾದ ವೇಣುಗೋಪಾಲ್, ಮಂಜುನಾಥ್, ತ್ರಿಭುವನ್, ಶಶಿಧರ್‌, ಸಿ.ಕೆ. ರಘು, ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ಕಾರಂತ್, ಮಂಗಳೂರು ಘಟಕದ ಅಧ್ಯಕ್ಷ ಮಧುಚಂದ್ರ, ತೀರ್ಪುಗಾರರಾದ ಜಯರಾಂ, ಶಿವಣ್ಣ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲಾತಿಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ದೊಡ್ಡ ಅನ್ಯಾಯ-ರಾಜುಗೌಡ
ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಾಮರಸ್ಯ ಉತ್ತೇಜಿಸುತ್ತವೆ-ಶಾಸಕ ಬಣಕಾರ