ಕನ್ನಡಪ್ರಭ ವಾರ್ತೆ ಹಾಸನ
ನಗರದ ಎಂ.ಜಿ. ರಸ್ತೆಯ ಸಮೀಪದ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ಪದವಿ ವಿಭಾಗದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂಗ್ಲ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರೂ ನನಗೆ ಕನ್ನಡದ ಬಗ್ಗೆ ವಿಶೇಷ ಅಭಿಮಾನ ಮತ್ತು ಒಲವಿದೆ. ಕನ್ನಡ ಭಾಷೆಯ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಹಾಸನ ಜಿಲ್ಲೆ ಅನೇಕ ಸಾಹಿತಿಗಳನ್ನು ನಾಡಿಗೆ ನೀಡಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದರು.ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥ ಬಿ.ಹೆಚ್. ರಾಮೇಗೌಡ ಮಾತನಾಡಿ, ಕನ್ನಡ ಕೇವಲ ಸಂವಹನದ ಭಾಷೆಯಲ್ಲ ಅದೊಂದು ಭಾವನೆ, ಸಂಸ್ಕೃತಿ, ಜೀವನದರ್ಶನ ಹಾಗೂ ನಮ್ಮ ಬದುಕಿನ ಮೌಲ್ಯಗಳ ಪ್ರತಿಬಿಂಬವಾಗಿದೆ. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳ ಸಂಭ್ರಮಕ್ಕೆ ಸೀಮಿತವಾಗಬಾರದು. ಕರ್ನಾಟಕ ಏಕೀಕರಣಕ್ಕಾಗಿ ನಡೆದ ಹೋರಾಟ, ಮಹನೀಯರ ತ್ಯಾಗ ಮತ್ತು ಕನ್ನಡ ನಾಡಿನ ಇತಿಹಾಸವನ್ನು ಯುವಪೀಳಿಗೆ ಅರಿತುಕೊಳ್ಳಬೇಕು ಎಂದು ಹೇಳಿದರು. ಶಾತವಾಹನರು, ಕದಂಬರು, ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಹಾಗೂ ವಿಜಯನಗರ ಅರಸರು ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಆದಿಕವಿ ಪಂಪ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡದ ಹಿರಿಮೆಯನ್ನು ತಮ್ಮ ಕೃತಿಗಳ ಮೂಲಕ ಸಾರಿದ್ದಾರೆ. ಇಂದಿನ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಮತ್ತು ಇತಿಹಾಸದ ಅಧ್ಯಯನದ ಜತೆಗೆ ದೈನಂದಿನ ಜೀವನದಲ್ಲಿಯೂ ಕನ್ನಡವನ್ನು ಬಳಸಬೇಕು. ಅನ್ಯ ಭಾಷೆಗಳನ್ನು ಗೌರವಿಸುತ್ತಲೇ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಕನ್ನಡ ನಾಡು-ನುಡಿ ಕುರಿತ ನೃತ್ಯ ಪ್ರದರ್ಶನ ಗಮನ ಸೆಳೆಯಿತು.ಇದೇ ವೇಳೆ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಎಂ.ಕೆ. ಪಾರ್ಥ, ಪದವಿ ವಿಭಾಗದ ಪ್ರಾಂಶುಪಾಲ ಬಿ.ಎನ್. ಅರುಣ್ ಕುಮಾರ್, ವಿಭಾಗದ ಮುಖ್ಯಸ್ಥ ಎಸ್.ವಿ. ಗಣೇಶ್, ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಪುನೀತ ಹೆನ್ರಿ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕಿ ಶೀಲಾ ನಿರೂಪಿಸಿದರು. ಸೌಂದರ್ಯ ಮತ್ತು ತಂಡದವರು ಪ್ರಾರ್ಥಿಸಿದರು.ಫೋಟೋ:
ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ಪದವಿ ವಿಭಾಗದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.