ಜೀತಪದ್ದತಿ ಮುಕ್ತ ಸಮಾಜಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ

KannadaprabhaNewsNetwork |  
Published : Feb 14, 2026, 02:15 AM IST
11ಕೆಆರ್ ಎಂಎನ್ 3.ಜೆಪಿಜಿರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಮತ್ತು ಜೀತಪದ್ಧತಿ ನಿಷೇದಾಧಿಕಾರಿಗಳಿಗೆ ಆಯೋಜಿಸಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಪಿ.ಆರ್.ಸವಿತಾ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ಅನಿಷ್ಟ ಪದ್ಧತಿಗಳಲ್ಲಿ ಒಂದಾದ ಜೀತ ಪದ್ಧತಿಯ ನಿರ್ಮೂಲನೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಸಮರ್ಥವಾಗಿ, ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ ಗ್ರಾಮ ಮಟ್ಟದಲ್ಲಿಯೇ ತಡೆಯುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಆರ್. ಸವಿತಾ ಹೇಳಿದರು

ರಾಮನಗರ: ಅನಿಷ್ಟ ಪದ್ಧತಿಗಳಲ್ಲಿ ಒಂದಾದ ಜೀತ ಪದ್ಧತಿಯ ನಿರ್ಮೂಲನೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಸಮರ್ಥವಾಗಿ, ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ ಗ್ರಾಮ ಮಟ್ಟದಲ್ಲಿಯೇ ತಡೆಯುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಆರ್. ಸವಿತಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಸಹಯೋಗದೊಂದಿಗೆ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಮತ್ತು ಜೀತಪದ್ಧತಿ ನಿಷೇಧಾಧಿಕಾರಿಗಳಿಗೆ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮಮಟ್ಟದ ಅಧಿಕಾರಿಗಳು ಜವಾಬ್ದಾರಿಯುತ ಹಾಗೂ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡು ಇಟ್ಟಿಗೆ ಭಟ್ಟಿ ಕೇಂದ್ರಗಳು, ಕೋಳಿ ಸಾಕಾಣಿಕಾ ಕೇಂದ್ರಗಳು, ರೇಷ್ಮೆ ನೂಲು ಬಿಚ್ಚುವ ಕೇಂದ್ರಗಳು, ಹೋಟೆಲ್‌ಗಳು, ತೋಟದ ಮನೆಗಳು ಮತ್ತು ಗಣಿಗಾರಿಕೆ ನಡೆಯುವ ಪ್ರದೇಶಗಳು, ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವವರನ್ನು ಸೂಕ್ಷ್ಮವಾಗಿ ಗಮನಿಸಬೇಕು, ಮಾಹಿತಿ ಕಲೆಹಾಕಬೇಕು. ಅಲ್ಲೇನಾದರೂ ಜೀತ ಪದ್ಧತಿ ಕಂಡು ಬಂದಲ್ಲಿ ಕಾನೂನಿನ ಮೂಲಕ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮನುಷ್ಯನನ್ನು ವಸ್ತುವಂತೆ ಕಂಡು, ಮಾರಾಟ ಮಾಡುವ, ಕೊಳ್ಳುವುದೇ ಜೀತಪದ್ಧತಿ. ಸಂವಿಧಾನದ 21ನೇ ವಿಧಿ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ಹಾಗೂ 23ನೇ ವಿಧಿಯು ಶೋಷಣೆಯ ವಿರುದ್ಧದ ಹಕ್ಕಿನ ಮೂಲಕ ದೇಶದ ಜನರಿಗೆ ಗೌರವಯುತ ಬದುಕನ್ನು ಕಲ್ಪಿಸಿದೆ. ಜೀತ ಕಾರ್ಮಿಕ ಪದ್ಧತಿ (ರದ್ಧತಿ) ಕಾಯ್ದೆ 1976 ಸೇರಿದಂತೆ ವಿವಿಧ ಕಾನೂನುಗಳನ್ನು ಜಾರಿಗೊಳಿಸಿದೆ.

ಜೀವನದ ಉನ್ನತಿಗೆ ಹಾಗೂ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಕಾನೂನಗಳನ್ನು ತಿಳಿದುಕೊಳ್ಳಬೇಕು. ಜೀತ ಪದ್ಧತಿಗೊಳಗಾದವರನ್ನು ಜೀತದಿಂದ ಮುಕ್ತಗೊಳಿಸಿ, ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು. ಸರ್ಕಾರಿ ಸೌಲಭ್ಯಗಳ ಪ್ರಯೋಜನ ಒದಗಿಸಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಸವಿತಾ ಹೇಳಿದರು.

ಉಪ ವಿಭಾಗಾಧಿಕಾರಿ ಬಿನೋಯ್ ಮಾತನಾಡಿ, ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ಹೋರಾಟಗಳ ಇತಿಹಾಸ, ಕಾಯ್ದೆ ಅನುಷ್ಠಾನ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಅವರು ಜೀತ ಪದ್ಧತಿ ನಿರ್ಮೂಲನಾ ಕಾರ್ಯಾಚರಣೆ, ಕಾಯ್ದೆಗಳಡಿ ಜೀತ ವಿಮುಕ್ತರ ಪುನರ್ವಸತಿ, ಸರ್ಕಾರಿ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.

ಜಿಪಂ ಕಾರ್ಯದರ್ಶಿ ಧನರಾಜ್, ಯೋಜನಾ ನಿರ್ದೇಶಕ ಶಿವಕುಮಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಪಿಡಿಒಗಳು, ಕಂದಾಯ ಅಧಿಕಾರಿಗಳು, ಆರಕ್ಷಕ ನಿರೀಕ್ಷಕರು ಭಾಗವಹಿಸಿದ್ದರು.

11ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಜಿಪಂ ಸಭಾಂಗಣದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಮತ್ತು ಜೀತಪದ್ಧತಿ ನಿಷೇಧಾಧಿಕಾರಿಗಳಿಗೆ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಪಿ.ಆರ್.ಸವಿತಾ ಉದ್ಘಾಟಿಸಿದರು. ಉಪ ವಿಭಾಗಾಧಿಕಾರಿ ಬಿನೋಯ್, ಯೋಜನಾ ನಿರ್ದೇಶಕ ಶಿವಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೇಲಿ ಮಂಗನ ಕಾಯಿಲೆ ಬಗ್ಗೆ ಎಚ್ಚರವಿರಲಿ: ಶೈಲಾ ಸಲಹೆ
ಸಂಕಷ್ಟಕ್ಕೆ ಸ್ಪಂದಿಸಿದರೆ ಅದು ಗುಂಪುಗಾರಿಕೆಯೇ?