)
ಕನ್ನಡಪ್ರಭ ವಾರ್ತೆ ಬೆಂಗಳೂರು
ಫೆ.10 ರಂದು ಸಂಜೆ 4 ಗಂಟೆಯ ಸುಮಾರಿಗೆ ಜೆ.ಪಿ.ನಗರದ 5ನೇ ಹಂತ ನಂಜುಂಡೇಶ್ವರ ಲೇಔಟ್‌ನ ಉದ್ಯಾನವನದ ಹತ್ತಿರ ಸುಮಾರು 3 ವರ್ಷದ ಮಗು ಒಬ್ಬಂಟಿಯಾಗಿ ಅಳುತ್ತಿದ್ದಳು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು 112 ಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದರು.
ಕೂಡಲೇ 112 ಸಿಬ್ಬಂದಿಯು ಹೊಯ್ಸಳದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಬೋರೇಲಿಂಗಯ್ಯ ಹಾಗೂ ಎಪಿಸಿ ನಾಗರಾಜ ಅವರಿಗೆ ಮಾಹಿತಿಯನ್ನು ರವಾನಿದ್ದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸಿ ಬಂದು ಮಗುವನ್ನು ಸಂತೈಸಿ, ಹೊಯ್ಸಳದಲ್ಲಿ ಕೂರಿಸಿಕೊಂಡರು. ನಂತರ ಸಾರ್ವಜನಿಕ ಪ್ರಕಟಣೆಯನ್ನು ಮಾಡಿದರು. ಇದನ್ನು ಆಲಿಸಿದ ಮಗುವಿನ ಪಾಲಕರು ತಕ್ಷಣ ಹೊಯ್ಸಳ ವಾಹನದ ಬಳಿ ಆಗಮಿಸಿದರು. ನಂತರ ಮಗುವನ್ನು ಪಾಲಕರಿಗೆ ಒಪ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಣೆಯಾಗಿದ್ದ ಬಾಲಕಿಯ ರಕ್ಷಣೆ:ಮತ್ತೊಂದು ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಣೆಯಾಗಿದ್ದ ಬಾಲಕಿಯನ್ನು ರಕ್ಷಣೆ ಮಾಡಿ ಪಾಲಕರಿಗೆ ಒಪ್ಪಿಸಿದ್ದಾರೆ.
ಫೆ.12 ರಂದು ಸಂಜೆ 5.15 ಕ್ಕೆ ವಿಶ್ವಪ್ರಿಯಾ ನಗರದಲ್ಲಿರುವ ಶಾಲೆಯೊಂದರ ಬಳಿಯಿಂದ ಮಗಳು ಕಾಣೆಯಾಗಿರುವುದಾಗಿ ಪಾಲಕರು 112 ಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿದ್ದು, ಕೂಡಲೇ 112 ಸಿಬ್ಬಂದಿ ಹೊಯ್ಸಳದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಮಹಾಲಿಂಗಯ್ಯ ಮತ್ತು ಎಪಿಸಿ ಮಂಜುನಾಥ್ ಅವರಿಗೆ ಮಾಹಿತಿಯನ್ನು ರವಾನಿದ್ದು, ಅವರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿ, ವಿಚಾರಣೆ ನಡೆಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮಗ್ರವಾಗಿ ಶೋಧ ಕಾರ್ಯ ನಡೆಸಿ, ಕಾಣೆಯಾಗಿದ್ದ ಬಾಲಕಿಯನ್ನು ಪತ್ತೆ ಹಚ್ಚಿ ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆ ಬಿಟ್ಟು ಬಂದಿದ್ದ ಅಪ್ರಾಪ್ತೆ:ಇನ್ನೊಂದು ಪ್ರಕರಣದಲ್ಲಿ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಫೆ.12 ರ ಸಂಜೆ 4:20 ಸುಮಾರಿಗೆ ಕಾವಲ್ ಬೈರಸಂದ್ರ, ಅಂಬೇಡ್ಕರ್ ಕಾಲೇಜ್ ಸಮೀಪ ರಸ್ತೆ ಬದಿಯಲ್ಲಿ 14 ವರ್ಷದ ಓರ್ವ ಅಪ್ರಾಪ್ತ ಬಾಲಕಿಯು ನಡೆದುಕೊಂಡು ಹೋಗುತ್ತಿದ್ದನ್ನು ಗಮನಿಸಿದ ಸಾರ್ವಜನಿಕರೊಬ್ಬರು 112 ಗೆ ಕರೆ ಮಾಡಿ ಮಾಹಿತಿಯನ್ನು ನೀಡಿದರು.ಕೂಡಲೇ 112 ಸಿಬ್ಬಂದಿ ಹೊಯ್ಸಳದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಚಂದ್ರಪ್ಪ ಮತ್ತು ಎಪಿಸಿ ದಿನೇಶ್ ನಾಯ್ಕ ಅವರಿಗೆ ಮಾಹಿತಿಯನ್ನು ರವಾನಿಸಿದ್ದು, ಅವರು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಹೋಗಿ ನೋಡಿದ್ದಾಗ ಆಕೆಯನ್ನು ಮೂವರು ಅಪರಿಚಿತ ವ್ಯಕ್ತಿಗಳು ಹಿಂಬಾಲಿಸುತ್ತಿರುವುದು ಗಮನಿಸಿದ್ದಾರೆ. ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಿ, ಬಾಲಕಿಯನ್ನು ವಿಚಾರ ಮಾಡಲಾಗಿದ್ದು ಆಕೆ ಕುಟುಂಬದ ಸಮಸ್ಯೆಯಿಂದ ಮನೆ ಬಿಟ್ಟು ಬಂದಿರುವುದು ಹಾಗೂ ಮನೆಗೆ ಹಿಂತಿರುಗಲು ಇಷ್ಟವಿಲ್ಲದಿರುವುದನ್ನು ತಿಳಿಸಿದ್ದಾಳೆ. ನಂತರ ಆಕೆಯನ್ನು ಸುರಕ್ಷಿತವಾಗಿ ಆಕೆಯ ಅತ್ತೆಯ ಮನೆಗೆ ಬಿಟ್ಟು ಬರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.