ಪ್ರಾಮಾಣಿಕತೆಯಿಂದ ಜವಾಬ್ದಾರಿ ನಿರ್ವಹಿಸೋಣ: ಸಂಸದ ಕಾಗೇರಿ

KannadaprabhaNewsNetwork |  
Published : Jun 16, 2026, 02:30 AM IST
ಸಿದ್ದಾಪುರ ತಾಲೂಕಿನ ಶಿರಳಗಿ ಪ್ರೌಢಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ನೀಡಿರುವ ಟ್ಯಾಬ್‌ಗಳಲ್ಲಿ ಪ್ರಾಥಮಿಕ ಕಲಿಕೆಯಿಂದ ಹಿಡಿದು ಸಕಲ ವಿಷಯಗಳೂ ಲಭ್ಯವಾಗುತ್ತವೆ. ಜಗತ್ತಿನ ಮಾಹಿತಿಗಳೆಲ್ಲವೂ ಇದರಲ್ಲಿದೆ ಎಂದರೆ ತಪ್ಪಾಗಲಾರದು.

ತಾಲೂಕಿನ ಶಿರಳಗಿ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ವಿದ್ಯಾರ್ಥಿಗಳಿಗೆ ನೀಡಿರುವ ಟ್ಯಾಬ್‌ಗಳಲ್ಲಿ ಪ್ರಾಥಮಿಕ ಕಲಿಕೆಯಿಂದ ಹಿಡಿದು ಸಕಲ ವಿಷಯಗಳೂ ಲಭ್ಯವಾಗುತ್ತವೆ. ಜಗತ್ತಿನ ಮಾಹಿತಿಗಳೆಲ್ಲವೂ ಇದರಲ್ಲಿದೆ ಎಂದರೆ ತಪ್ಪಾಗಲಾರದು. ಸಾಕಷ್ಟು ಉತ್ತಮ ಅಂಶಗಳು ಹಾಗೂ ಕೆಡಲು ಅಗತ್ಯವಾದವುಗಳೂ ಟ್ಯಾಬ್‌ಗಳಲ್ಲಿದ್ದು ವಿದ್ಯಾರ್ಥಿಗಳು ಉತ್ತಮ ಅಂಶಗಳನ್ನಷ್ಟೇ ಗ್ರಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕೇಂದ್ರ ಸರ್ಕಾರದ ತೈಲ ಮತ್ತು ಅನಿಲ ನಿಗಮದ ಸಿಎಸ್ಆರ್ ನಿಧಿಯಲ್ಲಿ ಜನಶ್ರೀ ಫೌಂಡೇಶನ್ ಸಹಕಾರದೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸುವಂತಹ ಟ್ಯಾಬ್‌ಗಳನ್ನು ತಾಲೂಕಿನ ಶಿರಳಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.

ಈಗಾಗಲೇ ಜಿಲ್ಲೆಯ ವಿವಿಧ ಶಾಲೆಗಳಿಗೆ ತಲಾ ₹೧೦ ಲಕ್ಷ ಮೌಲ್ಯದ ಸ್ಮಾರ್ಟ್‌ ಬೋರ್ಡ್‌ ವಿತರಿಸಲಾಗಿದೆ. ಇದೀಗ ತಾಲೂಕಿನ ಆರು ಪ್ರೌಢಶಾಲೆಗಳ ಆಯ್ದ ಕೆಲವು ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಿಸಿದ್ದೇವೆ. ಇಂತಹ ಆಧುನಿಕ ಪರಿಕರಗಳ ಬಳಕೆಯಿಂದ ಜ್ಞಾನ ಹೆಚ್ಚುವ ಜತೆಯಲ್ಲಿ ಕೌಶಲ್ಯ ವೃದ್ಧಿಯಾಗುತ್ತದೆ. ಜಗತ್ತಿನಲ್ಲಿ ಅತಿಹೆಚ್ಚು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ದೇಶ ಭಾರತವಾಗಿದೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿಯ ವಿದ್ಯಮಾನಗಳು, ಪರಿಸ್ಥಿತಿಗಳು ಗಂಭೀರತೆಯಿಂದ, ಸವಾಲಿನಿಂದ ಕೂಡಿವೆ. ಭಾರತಕ್ಕೆ ಇಂತಹ ಸಮಸ್ಯೆಗಳನ್ನು ಎದುರಿಸುವ ತಾಕತ್ತು ಇದೆ. ಇದಕ್ಕೆ ಪ್ರಧಾನಿ ಮೋದಿಯವರು ಕಾರಣ. ಒಂದು ದೇಶದ ಏಕತೆ, ಅಖಂಡತೆಗೆ ಭಂಗಬಾರದಂತೆ ನಾವೆಲ್ಲರೂ ಪ್ರಾಮಾಣಿಕತೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸೋಣ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ವಿವಿಧ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು, ಪಿಡಿಒ ರಾಜೇಶ ನಾಯ್ಕ, ತಿಮ್ಮಪ್ಪ ಎಂ.ಕೆ. ಇತರರು ಉಪಸ್ಥಿತರಿದ್ದರು. ಶಿರಳಗಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಶಿರಳಗಿ, ಜಿಡ್ಡಿ, ಹೊಸೂರ, ಬಿಳಗಿ, ಕಾನಸೂರ, ಹೆಗ್ಗರಣಿ ಪ್ರೌಢಶಾಲೆಗಳ ಗ್ರಾಮೀಣ ಭಾಗದ ೨೪ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸ್ಯಾಮ್ಸಂಗ್ ಕಂಪನಿಯ ಟ್ಯಾಬ್‌ಗಳನ್ನು ವಿತರಿಸಲಾಯಿತು. ಅಮೃತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿರಳಗಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಪ್ರೇಮಲತಾ ರಾಯಕರ ಸ್ವಾಗತಿಸಿದರು. ಶಿಕ್ಷಕಿ ಗೀತಾ ಬಿ.ಸಿ. ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಡಿಕೇರಿ: 3 ಲಕ್ಷ ರು. ಮೌಲ್ಯದ ಸವಲತ್ತು ವಿತರಣೆ
ಹವಾಮಾನ ವೈಪರೀತ್ಯ: ಜಿಲ್ಲೆಯಲ್ಲಿ ಭತ್ತ ಕೃಷಿ ಭಾರಿ ಕುಸಿತ