ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಕಳೆದ ಐದು ವರ್ಷಗಳಿಂದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುತ್ತಾ ಬಂದಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಅನನ್ಯವಾದುದು ಹಾಗೂ ರಾಜ್ಯದ ಪರಿಷತ್ತಿಗೆ ಮಾದರಿಯಾದದ್ದು ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ ಭಾವಿಕೇರಿ ನುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉತ್ತರಕನ್ನಡ ಜಿಲ್ಲಾ ಮತ್ತು ದಾಂಡೇಲಿ ತಾಲೂಕು ಘಟಕಗಳ ಆಶ್ರಯದಲ್ಲಿ ರೋಟರಿ ಶಾಲಾ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ.ಯ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದ ದಾಂಡೇಲಿ ತಾಲೂಕಿನ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ತಾಲೂಕಿಗೆ ಹೋಗಿ ಎಸ್.ಎಸ್.ಎಲ್.ಸಿ. ಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಈ ಅಭಿನಂದನಾ ಕಾರ್ಯಕ್ರಮ ರಾಜ್ಯದ ಬೇರೆಲ್ಲೂ ನಡೆಯುವುದಿಲ್ಲ. ಸರ್ಕಾರ ಅಥವಾ ಕೇಂದ್ರ ಸಾಹಿತ್ಯ ಪರಿಷತ್ತಿನ ಯಾವುದೇ ಅನುದಾನವಿಲ್ಲದೆ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಇಂತಹದೊಂದು ಮಹತ್ವದ ಕಾರ್ಯವನ್ನು ಮಾಡುತ್ತಿರುವ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಹಾಗೂ ಎಲ್ಲ ತಾಲೂಕು ಘಟಕಗಳ ಅಧ್ಯಕ್ಷರ, ಪದಾಧಿಕಾರಿಗಳ ಪ್ರಯತ್ನ ನಿಜಕ್ಕೂ ಸಾರ್ಥಕವಾದುದು. ಮಾತೃಭಾಷೆ ಯಾವುದೇ ಇದ್ದರೂ ವಿದ್ಯಾರ್ಥಿಗಳು ನಾಡ ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡದ ಕಾಳಜಿಯ ಬಗ್ಗೆ ಒಂದಿಷ್ಟು ಅರಿವು ಮೂಡಿಸಬೇಕೆನ್ನುವ ಕಾರಣಕ್ಕಾಗಿ ಈ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೂಡ ಈ ಕಾರ್ಯಕ್ರಮ ನಿರಂತರವಾಗಿ ಮುನ್ನಡೆಯುವಂತೆ ಗೆಳೆಯರೆಲ್ಲರೂ ಸೇರಿ ಹೆಜ್ಜೆ ಇಡಬೇಕಾಗಿದೆ ಎಂದರು. ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಹಳಿಯಾಳ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ ನಾಯಕ, ಬೇಲೆಕೇರಿ, ದಾಂಡೇಲಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಉತ್ಪಲ್ ಶಿರೋಡಕರ್, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆಹೊಸೂರ, ದಾಂಡೇಲಿ ತಾಲೂಕು ಸಿ.ಆರ್.ಪಿ. ಲಲಿತಾ ಪುಟ್ಟೇಗೌಡ, ರೋಟರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಕಲ್ಪನಾ ನಾಯ್ಕ ಮುಂತಾದವರು ಮಾತನಾಡಿದರು.ಸಿ.ಆರ್.ಪಿ.ಗಳಾದ ಶ್ರೀದೇವಿ ಪುಲೆ, ಬಿಬಿ ಹಜಿರಬಿ ವೇದಿಕೆಯಲ್ಲಿದ್ದರು. ಬೆಂಗಳೂರಿನ ಅಭಿನವ ಪ್ರಕಾಶನ ನೀಡಿದ ಕನ್ನಡದ ಪುಸ್ತಕ, ಕಾಗದ ಕಂಪನಿಯ ನೋಟಬುಕ್, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಬಾಬಣ್ಣ ಶ್ರೀವತ್ಸ, ಉಜ್ವಲಾ ಸದಲಗಿ ಸೇರಿದಂತೆ ಹಲವು ದಾನಿಗಳು ನೀಡಿದ ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ ಸ್ವಾಗತಿಸಿದರು. ಪದಾಧಿಕಾರಿ ವೆಂಕಮ್ಮ ಗಾಂವಕರ ವಂದಿಸಿದರು. ಎನ್.ಆರ್. ನಾಯ್ಕ್ ನಿರೂಪಿಸಿದರು. ಪರಿಷತ್ ಕಾರ್ಯದರ್ಶಿ ಗುರುಶಾಂತ ಜಡೆ ಹಿರೇಮಠ, ಸದಸ್ಯರಾದ ಸುರೇಶ್ ಪಾಲನಕರ ಮುಂತಾದವರು ಸಹಕರಿಸಿದರು. ಇದೇ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದ ಶಾಲೆಗಳ ಅಧ್ಯಾಪಕರನ್ನೂ ಕೂಡ ಸನ್ಮಾನಿಸಿ ಗೌರವಿಸಿದರು.