ಚನ್ನಪಟ್ಟಣ: ವಿದ್ಯಾರ್ಥಿಗಳು ಸ್ವಸ್ಥ್ಯ ಸಂಕಲ್ಪ ಮಾಡಿ ಉತ್ತಮ ಆಹಾರ, ಹವ್ಯಾಸ ಬೆಳೆಸಿಕೊಂಡು ಆರೋಗ್ಯಕರ ನಾಡನ್ನು ಕಟ್ಟಬೇಕು ಎಂದು ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ತಿಳಿಸಿದರು.
ತಾಲೂಕಿನ ಇಗ್ಗಲೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ''''''''ಸ್ವಸ್ಥ್ಯ ಸಂಕಲ್ಪ'''''''' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಬೆನ್ನೆಲುಬಾಗಿರುವ ಯುವಕರು ದಾರಿ ತಪ್ಪುತ್ತಿರುವುದು ದುರಂತದ ಸಂಗತಿ. ಹದಿಹರೆಯ ತುಂಬಾ ಅಪಾಯಕಾರಿ. ಈ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ಬಿದ್ದವರ ಸಂಖ್ಯೆ ಅಪಾರ. ಇಂತಹ ಮಾದಕ ವಸ್ತುಗಳ ಚಟಕ್ಕೆ ಬಿದ್ದರೆ ಮತ್ತೆ ಹೊರಬರುವುದು ಕಷ್ಟ. ಮದ್ಯಪಾನ, ಮಾದಕ ವಸ್ತುಗಳು ಮನುಷ್ಯನ ದೇಹವನ್ನು ಜಿಗುಪ್ಸೆಗೆ ತಳ್ಳುತ್ತವೆ, ಮಾದಕ ವಸ್ತುಗಳ ದಾಸರಾದವರಿಗೆ ಆತ್ಮಹತ್ಯೆ, ಅಪಘಾತ, ಅಕಾಲಿಕ ಮರಣ ಕಟ್ಟಿಟ್ಟ ಬುತ್ತಿ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಸ್ವಾಸ್ಥ್ಯಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಎಂದು ಕರೆ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೇಷ್ಮಾ ಮಾತನಾಡಿ, ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದು, ಪ್ರತಿ ವರ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸಿಕೊಂಡು ಬಂದಿದೆ. ಹದಿಹರೆಯದ ವಯಸ್ಸಿನಲ್ಲಿರುವ ಕಾಲೇಜು ವಿದ್ಯಾರ್ಥಿಗಳು ತಮ್ಮ ಇಪ್ಪತ್ತನೆಯ ವಯಸ್ಸಿನ ತನಕ ಮನಸ್ಸನ್ನು ಹತೋಟಿ ಇಟ್ಟುಕೊಳ್ಳಬೇಕು, ಯಾವುದೇ ಮಾದಕ ವಸ್ತುಗಳಿಗೆ ದಾಸರಾಗಬಾರದು, ನಿಮ್ಮ ಮನೆ, ಕುಟುಂಬ, ಗ್ರಾಮಗಳಿಂದ ಮಾದಕ ವಸ್ತುಗಳನ್ನು ನಿರ್ಮೂಲನೆ ಮಾಡಬೇಕು ಎಂದರು. ಪ್ರಾಂಶುಪಾಲ ರಾಮಲಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಪ್ರಾರಂಭಕ್ಕೆ ತಮಾಷೆಗಾಗಿ ಮಾದಕ ವಸ್ತುಗಳಿಗೆ ಮೋಹಿತರಾಗಿ ನಂತರ ಅದರೊಳಗೆ ಜಾರಿಬಿಡುತ್ತಾರೆ. ಇದರಿಂದ ಅಂತಹವರ ಕುಟುಂಬ ಬೀದಿಪಾಲಾಗುವುದರ ಜೊತೆಗೆ ಜನರ ನಗೆಪಾಟಲಿಗೆ ಬಲಿಯಾಗುತ್ತಾರೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು ಸಮಾಜದ ಸತ್ಪ್ರಜೆಗಳಾಗಿ ಬಾಳುವೆ ಮಾಡುತ್ತೇವೆಂದು ಗಣ್ಯರ ಎದುರು ಪ್ರಮಾಣ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಗಾಲ ವಲಯದ ಮೇಲ್ವಿಚಾರಕಿ ಭಾಗ್ಯ ಮಾತನಾಡಿದರು. ಸೇವಾ ಪ್ರತಿನಿಧಿಗಳಾದ ಛಾಯಾಕುಮಾರಿ, ರಾಧಾಮಣಿ, ಉಪನ್ಯಾಸಕರಾದ ರವಿಚಂದ್ರ, ಚಂದ್ರಕಲಾ, ಅಂಬುಜಾ, ಮಹದೇವಸ್ವಾಮಿ, ಶಿವನಂಜೇಗೌಡ, ನಿಂಗರಾಜು, ಭಾರತಿ ಮೊದಲಾದವರು ಉಪಸ್ಥಿತರಿದ್ದರು.
ಪೊಟೊ೨೯ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.