ರೈತಸ್ನೇಹಿ ಮಾರುಕಟ್ಟೆ ಸೃಷ್ಟಿಯಾಗಲಿ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork | Published : Jun 30, 2025 12:34 AM

ಯಾವ ದೇಶಕ್ಕೆ ಸ್ವಾಭಿಮಾನ ಇರುವುದಿಲ್ಲವೋ ಆ ದೇಶಕ್ಕೆ ಅಸ್ತಿತ್ವ ಕೂಡ ಇರುವುದಿಲ್ಲ. ಈ ದೇಶದ ಸ್ಥಾಭಿಮಾನ, ಸ್ವಾವಲಂಬನೆ, ಹಸಿರು ಕ್ರಾಂತಿ ಮಾಡಿರುವುದು ರೈತ. ಈಗ 133 ಕೋಟಿ ಜನರಿಗೆ ಆಹಾರ ಸಿಗುತ್ತಿದೆ.

ರಾಣಿಬೆನ್ನೂರು: ನಮ್ಮ ದೇಶದ ಎಲ್ಲ ಜನರಿಗೂ ಆಹಾರ ದೊರೆಯುತ್ತಿದೆ. ಆದರೆ ಆಹಾರ ಬೆಳೆಯುವ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಇದು ವಿಪರ್ಯಾಸವಾಗಿದ್ದು, ನಮ್ಮ ಕೃಷಿ ನೀತಿಯಲ್ಲಿ ಲೋಪದೋಷಗಳಿವೆ. ಅದಕ್ಕಾಗಿ ರೈತರ ಪರವಾಗಿರುವ ಮಾರುಕಟ್ಟೆ ಸೃಷ್ಟಿಯಾಗಬೇಕು ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿ ಮಹಾವಿದ್ಯಾಲಯದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಮ್ಮ ಮೂಲ ಕಾಯಕ ಕೃಷಿ ನಮ್ಮ ದೇಶದ ಇತಿಹಾಸ ಕೃಷಿ, ಭವಿಷ್ಯವೂ ಕೃಷಿ. ನೀವು ಕೃಷಿಯ ವಿದ್ಯಾರ್ಥಿಗಳಾಗಿ ದೇಶದ ಭವಿಷ್ಯ ಕೃಷಿ ಅಂತ ನಿರೂಪಿಸಿ ತೋರಿಸಬೇಕಾಗಿದೆ. ಕೃಷಿ ಕೂಡ ಲಾಭದಾಯಕವಾದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಕೃಷಿ ಕೇವಲ ಲಾಭವಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚು ಈ ದೇಶದ ನಾಗರಿಕರಿಗೆ ಆಹಾರ ಒದಗಿಸುವ ಜವಾಬ್ದಾರಿ ಇದೆ. ಬೇರೆ ಯಾವುದೇ ಕಂಪನಿ, ಸಂಸ್ಥೆಗೆ ಈ ಜವಾಬ್ದಾರಿ ಇಲ್ಲ ಎಂದರು.

ನಮ್ಮ ದೇಶ ಸ್ವಾತಂತ್ರ‍್ಯ ಆದಾಗ 33 ಕೋಟಿ ಜನಸಂಖ್ಯೆ ಇತ್ತು ಈಗ 130 ಕೋಟಿಯಾಗಿದೆ. ಆಗ 33 ಕೋಟಿ ಜನರಿಗೆ ಆಹಾರ ಒದಗಿಸಲು ಸಾಧ್ಯವಾಗಿರಲಿಲ್ಲ. ವಿದೇಶಗಳಿಂದ ಆಹಾರ ಪದಾರ್ಥ ಆಮದು ಮಾಡಿಕೊಳ್ಳುತ್ತಿದ್ದೇವು. ಆಹಾರದ ಸುರಕ್ಷತೆ ಒಂದು ದೇಶಕ್ಕೆ ಇಲ್ಲ ಅಂದರೆ ಆ ದೇಶ ಸ್ವಾಭಿಮಾನಿ ದೇಶ ಆಗುವುದಿಲ್ಲ. ಯಾವ ದೇಶಕ್ಕೆ ಸ್ವಾಭಿಮಾನ ಇರುವುದಿಲ್ಲವೋ ಆ ದೇಶಕ್ಕೆ ಅಸ್ತಿತ್ವ ಕೂಡ ಇರುವುದಿಲ್ಲ. ಈ ದೇಶದ ಸ್ಥಾಭಿಮಾನ, ಸ್ವಾವಲಂಬನೆ, ಹಸಿರು ಕ್ರಾಂತಿ ಮಾಡಿರುವುದು ರೈತ. ಈಗ 133 ಕೋಟಿ ಜನರಿಗೆ ಆಹಾರ ಸಿಗುತ್ತಿದೆ ಎಂದರು.

ಕೃಷಿ ವಿಜ್ಞಾನಿಗಳು ಮಾರ್ಕೆಟಿಂಗ್, ಮೈಕ್ರೋ ಎಕನಾಮಿಕ್ಸ್ ಬಗ್ಗೆ ತಿಳಿದುಕೊಳ್ಳಬೇಕು. ಅದು ಬಹಳ ಮಹತ್ವದ ವಿಷಯ. ಪಾಥಮಿಕ ವಲಯದಲ್ಲಿ ಶೇ. 1ರಷ್ಟು ಅಭಿವೃದ್ಧಿಯಾದರೆ ಶೇ. 4ರಷ್ಟು ಉತ್ಪಾದನಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತದೆ. ಸೇವಾ ವಲಯದಲ್ಲಿ ಶೇ. 10ರಷ್ಟು ಅಭಿವೃದ್ಧಿಯಾಗುತ್ತದೆ. ಯಾವುದೇ ಕೃಷಿ ಆಧರಿತ ದೇಶದಲ್ಲಿ ಕೃಷಿ ಕ್ಷೇತ್ರ ಅತ್ಯಂತ ಬಹಳ ಮುಖ್ಯವಾಗಿದೆ.

ನಾನು ನೀರಾವರಿ ಸಚಿವನಾಗಿ ಏಳು ಲಕ್ಷ ಎಕರೆ ನೀರಾವರಿಯಾಗಿಸುವ ಕೆಲಸ ಮಾಡಿದ್ದೇನೆ. ಜಿಲ್ಲೆಯ ರಾಣಿಬೆನ್ನೂರು, ಬ್ಯಾಡಗಿ ತಾಲೂಕುಗಳಲ್ಲಿ ಒಂದು ಲಕ್ಷ ಎಕರೆ ಜಮೀನು ನೀರಾವರಿ ಮಾಡಿದ್ದೇನೆ. ಭೂಮಿ ತಾಯಿಗೆ ಒಂದು ಕಾಳು ಹಾಕಿದರೆ ಹತ್ತು ಕಾಳು ನೀಡುವ ಶಕ್ತಿ ಇದೆ. ಭೂಮಿಗೆ ಬೀಜ ಬಿತ್ತಿ ನೀರು ಹಾಕಿ ಅದರ ಜತೆಗೆ ರೈತನ ಬೆವರು ಸೇರಿದರೆ ಉತ್ತಮ ಬೆಳೆ ಬರುತ್ತದೆ. ಕೃಷಿಯಲ್ಲಿ ಸಿಗುವ ಸಮಾಧಾನ ಎಲ್ಲಿಯೂ ಸಿಗುವುದಿಲ್ಲ ಎಂದರು.

ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಹಾವಿದ್ಯಾಲಯದ ಡೀನ್ ಡಾ. ಎ.ಜಿ. ಕೊಪ್ಪದ, ಮಾಜಿ ಡೀನ್ ಡಾ. ಜೆ.ಎಸ್. ಹಿಳ್ಳಿ, ಆಡಳಿತ ಮಂಡಳಿಯ ಸದಸ್ಯ ವೀರನಗೌಡ ಪೊಲೀಸಗೌಡ್ರ, ಸುತ್ತಮುತ್ತಲಿನ ಗ್ರಾಮದ ರೈತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.