ತಂಬಾಕುರಹಿತ ಸಮಾಜ ನಿರ್ಮಿಸೋಣ: ಡಾ. ಎಲ್‌.ಆರ್‌. ಶಂಕರ್

KannadaprabhaNewsNetwork |  
Published : Feb 09, 2024, 01:51 AM IST
8ಎಚ್‌ಪಿಟಿ1- ಹೊಸಪೇಟೆಯಲ್ಲಿ ಬುಧವಾರ ನಡೆದ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿಗಾಗಿ ನಡೆದ ಗುಲಾಬಿ ಆಂದೋಲನ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಾಧಿಕಾರಿ ಡಾ. ಎಲ್‌.ಆರ್‌. ಶಂಕರ್ ನಾಯ್ಕ ಅವರು  ಚಾಲನೆ ನೀಡಿದರು. | Kannada Prabha

ಸಾರಾಂಶ

ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ವರ್ತಕರಿಗೆ ಹಾಗೂ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುವ ವ್ಯಕ್ತಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಮನ ಪರಿವರ್ತನೆಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೊಸಪೇಟೆ: ತಂಬಾಕು ಉತ್ಪನ್ನಗಳ ಉಪಯೋಗದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಹೊಸಪೇಟೆ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುಲಾಬಿ ಆಂದೋಲನ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಾಧಿಕಾರಿ ಡಾ. ಎಲ್‌.ಆರ್‌. ಶಂಕರ್ ನಾಯ್ಕಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ಸಾರ್ವಜನಿಕರ ಆರೋಗ್ಯ ಹಾಳಾಗುವ ಜತೆಗೆ ಸಮಾಜದ ಅಭಿವೃದ್ಧಿಗೆ ಕಂಟಕವಾಗಿ ಪರಿಣಮಿಸಿದೆ. ಸಮಾಜದ ಸ್ವಾಸ್ಥ್ಯ ಮತ್ತು ಜನರ ಆರೋಗ್ಯ ಕಾಪಾಡಲು ಸಾರ್ವಜನಿಕರು, ಸಂಘ-ಸಂಸ್ಥೆಗಳು, ಆಸಕ್ತರು ಈ ಅಭಿಯಾನದಲ್ಲಿ ಕೈ ಜೋಡಿಸಿ ತಂಬಾಕುರಹಿತ ಸಮಾಜ ನಿರ್ಮಿಸಲು ಸಹಕರಿಸಬೇಕು ಎಂದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನಿಯಂತ್ರಣಾಧಿಕಾರಿ ಡಾ. ಷಣ್ಮುಖ ನಾಯ್ಕ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ವರ್ತಕರಿಗೆ ಹಾಗೂ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುವ ವ್ಯಕ್ತಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಮನ ಪರಿವರ್ತನೆಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವು ಯಶಸ್ವಿಯಾಗಲು ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ನಿಯಂತ್ರಣ ತನಿಖಾದಳದ ಅಧಿಕಾರಿಗಳು, ಸಿಗರೇಟು ಮತ್ತು ತಂಬಾಕು ಇತರ ಉತ್ಪನ್ನಗಳ ಅಧಿನಿಯಮ-2003ರ ಸೆಕ್ಷನ್-4, 5, 6ಎ, 6ಬಿ, ಮತ್ತು 7ರ ಅಡಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಿ, ಈ ಕಾಯ್ದೆ ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಬಿ. ಜಂಬಯ್ಯ ನಾಯಕ, ಜಿಲ್ಲೆಯ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳು, ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ, ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಇದ್ದರು.

ಜಾಗೃತಿ ಜಾಥಾ: ಹೊಸಪೇಟೆ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಡಿಎಚ್‌ಒ ಕಚೇರಿ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥವು ರಾಮಾ ಟಾಕೀಸ್ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್ ವರೆಗೆ ನಡೆಯಿತು. ಜಾಥಾದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ನಗರ ಆರೋಗ್ಯ ಕೇಂದ್ರಗಳ ಸಿಬ್ಬಂದಿ ವರ್ಗ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?