ಶೋಷಣೆಮುಕ್ತ ಸಮಾಜ ನಿರ್ಮಾಣವಾಗಲಿ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Nov 17, 2025, 01:15 AM IST

ಸಾರಾಂಶ

ನಮ್ಮ ಸಮಾಜದ ಶಕ್ತಿಯನ್ನು ಪ್ರೀತಿಸಬೇಕು. ಇತರ ಸಮಾಜವನ್ನು ಗೌರವಿಸಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವತ್ತ ಎಲ್ಲರೂ ಗಮನ ಹರಿಸಬೇಕು. ಇದಕ್ಕೆ ಪ್ರತಿಯೊಂದು ಸಮಾಜಗಳು ಆದ್ಯತೆ ನೀಡಬೇಕು.

ಗದಗ: ಸಾಮರಸ್ಯದ ಸಮಾಜ‌ ಮತ್ತು ಪರಸ್ಪರ ಔದಾರ್ಯದ ಬದುಕು ನಿರ್ಮಾಣ ಮಾಡುವಲ್ಲಿ ಎಲ್ಲ ಸಮಾಜಗಳ ಪಾತ್ರ ಮಹತ್ವದ್ದಾಗಿದೆ ಎಂದು ಕಾನೂನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಪಂಚಮಸಾಲಿ ಸಮಾಜ ವಿವಿಧೋದ್ದೇಶಗಳ ಸೇವಾ ಸಂಘ ಕಳಸಾಪುರ ಹಾಗೂ ಸರ್ವ ಧರ್ಮದವರ ಸಹಕಾರದೊಂದಿಗೆ ಆಯೋಜಿಸಿದ್ದ ವೀರ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸಮಾಜದ ಶಕ್ತಿಯನ್ನು ಪ್ರೀತಿಸಬೇಕು. ಇತರ ಸಮಾಜವನ್ನು ಗೌರವಿಸಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವತ್ತ ಎಲ್ಲರೂ ಗಮನ ಹರಿಸಬೇಕು. ಇದಕ್ಕೆ ಪ್ರತಿಯೊಂದು ಸಮಾಜಗಳು ಆದ್ಯತೆ ನೀಡಬೇಕು.

ಬದಲಾಗುತ್ತಿರುವ ಜನರ ಮನಸ್ಥಿತಿಯ ಮಧ್ಯೆ ಗ್ರಾಮೀಣ ಭಾಗದಲ್ಲಿ ಸಾಮರಸ್ಯ ಬೆಳಸುವುದು ಮತ್ತು ಉಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೊದಲು ಮಾನಸಿಕ ಔದಾರ್ಯತೆಯನ್ನು ಬೆಳೆಸಬೇಕು.

ಇಂದು ಸಮಾಜದಲ್ಲಿ ಅಸೂಯೆ, ಜಾತಿ ಜಾತಿಗಳ ವಿಭಜನೆ, ಸ್ವಾರ್ಥಕ್ಕಾಗಿ ಒಡೆದಾಳುವ ಕೆಲಸಗಳು ನಡೆಯುತ್ತಿವೆ. ಇದನ್ನೆಲ್ಲ ಹೋಗಲಾಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿನ ಹಿರಿಯರು ಗಮನ ನೀಡಬೇಕು.

ಕಿತ್ತೂರು ರಾಣಿ ಚೆನ್ನಮ್ಮನ ವಾರಸುದಾರರಾದ ಪಂಚಮಸಾಲಿ ಸಮಾಜದವರು ಕಳಸಾಪುರ ಗ್ರಾಮದಲ್ಲಿನ ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.

ಹರಿಹರ ಪಂಚಮಸಾಲಿ ಶ್ರೀಗಳು ಜನರಿಗೆ ಜ್ಞಾನ, ಭಕ್ತಿ, ಯೋಗ, ಸಮಾಧಾನ, ಪ್ರೀತಿ ಎನ್ನುವ ಪಂಚ ದಾಸೋಹಗಳನ್ನು ಅನುಷ್ಠಾನ ಮಾಡುತ್ತಿದ್ದು, ಇದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ಸಾಮರಸ್ಯದ‌ ಸಮಾಜದ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು, ತಮ್ಮ ತಮ್ಮ ಸಮಾಜವನ್ನು ಪ್ರೀತಿಸಬೇಕು ಎಂದ ಶ್ರೀಗಳು, ಯೋಗ ಮತ್ತು ಉತ್ತಮ ಬದುಕು, ನೆಮ್ಮದಿಯ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ, ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಸುದೀರ್ಘವಾಗಿ ಮಾತನಾಡಿದರು.

ಅಡಿವೆಪ್ಪಗೌಡ ರಾಮನಗೌಡ್ರ, ನಜೀರ ಅಹ್ಮದ ಪಂಡಾರಿ ಸೇರಿದಂತೆ ಗ್ರಾಮದ‌ ಅನೇಕ ಹಿರಿಯರು, ಸಮಾಜದ ಮುಖಂಡರು, ಯುವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ
ಹೋರಾಟಗಾರರ ಮೇಲಿನ ಎಲ್ಲ ಕೇಸ್ ಹಿಂಪಡೆಯಿರಿ