ಶ್ರೀರಂಗಪಟ್ಟಣ: ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಹಬ್ಬದಂತೆ ಸಂಭ್ರಮದಿಂದ ಆಚರಿಸೋಣ ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಕರೆ ನೀಡಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನ.1ರ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲೂಕಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡ ಪರ ಸಂಘಟನೆ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳು ಸಹಕಾರ ನೀಡುವಂತೆ ಮನವಿ ಮಾಡಿದರು. ರೈತರು, ಕಲಾವಿದರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 5 ಮಂದಿ ಸಾಧಕರಿಗೆ ಸನ್ಮಾನಿಸಿ ಗೌರವ ನೀಡುವುದು ಹಾಗೂ ಕನ್ನಡ ರಾಜ್ಯೋತ್ಸವದಂದು ಭುವನೇಶ್ವರಿ ಹೊತ್ತ ರಥೋತ್ಸವ ಮೆರವಣಿಗೆ ನಡೆಸುವಂತೆ ಪೂರ್ವಭಾವಿ ಸಭೆಯಲ್ಲಿ ಒತ್ತಾಯಿಸಿದರು. ಸಭೆಯಲ್ಲಿ ಕಸಾಪ ನಗರ ಘಟಕ ಅಧ್ಯಕ್ಷ ಎಂ.ಸುರೇಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಚಿಕ್ಕಪಾಳ್ಯ ಪುರುಷೋತ್ತಮ್, ಚಂದಗಾಲು ಶಂಕರ್, ಎಜಾಜ್‌ಪಾಷ, ಕೆ.ಜೆ ಲೋಕೇಶ್ ಸೇರಿ ವಿವಿಧ ಕನ್ನಡ ಪರ ಸಂಘಟನೆ ಮುಖಂಡರು ಹಾಗೂ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
--------ಕಂಟೈನರ್ ಉರುಳಿ ಬಿದ್ದು ಚಾಲಕನ ಕಾಲು ಕಟ್
ಶ್ರೀರಂಗಪಟ್ಟಣ: ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಹೆದ್ದಾರಿಯಲ್ಲಿ ಉರುಳಿ ಬಿದ್ದ ಪರಿಣಾಮ ಚಾಲಕನ ಕಾಲು ತುಂಡಾಗಿರುವ ಘಟನೆ ತಾಲೂಕಿನ ಗರುಡನ ಉಕ್ಕಡ ಗ್ರಾಮದ ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ರಾಜೇಂದ್ರ (30) ಕಾಲು ಕಳೆದುಕೊಂಡ ಚಾಲಕ ಎಂದು ತಿಳಿದು ಬಂದಿದೆ. ಈತ ಮೈಸೂರಿನಿಂದ ಬೆಂಗಳೂರು ಕಡೆಗೆ ಎಂಆರ್‌ಎಫ್ ಟೈರ್ ತುಂಬಿಕೊಂಡು ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲಿಸಿ ಗಾಯಗೊಂಡಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.