ಲಕ್ಷ್ಮೇಶ್ವರ: ಮಹ್ಮದ್ ಪೈಗಂಬರ್ ಜಯಂತಿಯನ್ನು ಶಾಂತಿಯುತವಾಗಿ ಆಚರಿಸೋಣ. ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಹಬ್ಬದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದು ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಹೇಳಿದರು.
ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಮಹ್ಮದ್ ಪೈಗಂಬರ್ ಜಯಂತಿ ಪ್ರಮುಖವಾಗಿದೆ. ಮಹ್ಮದ್ ಪೈಗಂಬರ್ ಅವರ ಜೀವನ ಮೌಲ್ಯಗಳನ್ನು ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗುವುದು ಅಗತ್ಯವಾಗಿದೆ. ಹಿಂದೂ ಹಾಗೂ ಮುಸ್ಲಿಮರು ಸೇರಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸುವುದು ಪ್ರಮುಖವಾಗಿದೆ ಎಂದರು.
ಸಭೆಯಲ್ಲಿ ಡಿವೈಎಸ್‌ಪಿ ಬಿ.ಎಸ್. ನೇಮಗೌಡ ಹಾಗೂ ಪಿಎಸ್‌ಐ ನಾಗರಾಜ ಗಡದ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ ಜಯಂತಿ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಿದೆ. ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಪೂರ್ಣಾಜಿ ಕರಾಟೆ, ಗಂಗಾಧರ ಮೆಣಸಿನಕಾಯಿ ಅವರು ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗುವುದು ಅಗತ್ಯವಾಗಿದೆ ಎಂದರು.
ಗದಗ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು 2026ರ ಆ. 1ರಿಂದ 2027ರ ಜ. 2ರ ವರೆಗೆ ಮಧ್ಯಸ್ಥಿಕೆ ಅಭಿಯಾನ 3.0 ಹಮ್ಮಿಕೊಳ್ಳಲಾಗಿದೆ.ವೈವಾಹಿಕ, ಕೌಟುಂಬಿಕ, ಆಸ್ತಿ ಮತ್ತು ವಿಭಜನೆ, ಚೆಕ್ ಅಮಾನ್ಯ, ಸಾಲ ವಸೂಲಾತಿ, ಮೋಟಾರು ವಾಹನ ಅಪಘಾತ ಪರಿಹಾರ, ವಾಣಿಜ್ಯ, ಗ್ರಾಹಕರ ವಿವಾದ ಹಾಗೂ ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ತರಬೇತಿ ಪಡೆದ ಮಧ್ಯಸ್ಥಿಕೆದಾರರ ಮೂಲಕ ಇತ್ಯರ್ಥಪಡಿಸಲಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನಾಗವೇಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಸಕ್ತ ಕಕ್ಷಿದಾರರು ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಆಯಾ ತಾಲೂಕು (ರೋಣ, ನರಗುಂದ, ಲಕ್ಷ್ಮೇಶ್ವರ, ಮುಂಡರಗಿ) ಸಮಿತಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿ ಹಾಗೂ ಉಚಿತ ಕಾನೂನು ನೆರವಿಗಾಗಿ ಟೋಲ್ ಫ್ರೀ ಸಂಖ್ಯೆ 15100 ಕರೆ ಮಾಡಬಹುದು.