ಹಾನಗಲ್ಲ ಶ್ರೀಕುಮಾರ ಸ್ವಾಮೀಜಿ ಜಯಂತಿ ಅದ್ಧೂರಿ ಆಚರಿಸೋಣ

KannadaprabhaNewsNetwork | Published : Aug 28, 2024 12:47 AM

ಸಾರಾಂಶ

ಕಾರ್ಯಕ್ರಮ ನಾವೆಲ್ಲರೂ ಸೇರಿ ತನು-ಮನ-ಧನದಿಂದ ಸಹಾಯ ಸಹಕಾರ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸೋಣ

ಮುಂಡರಗಿ: ಶ್ರೀಹಾನಗಲ್ಲ ಕುಮಾರ ಮಹಾಶಿವಯೋಗಿಗಳು ಅಜ್ಞಾನ ಅಂಧಕಾರದಿಂದ ಬಡವಾಗಿದ್ದ ಜತೆಗೆ ಜಡವಾಗಿದ್ದ ನಾಡನ್ನು ಶರಣ ಸಂಸ್ಕೃತಿಯ ನೆಲೆಯಲ್ಲಿ ಪುನಶ್ಚೇತನಗೊಳಿಸಿದವರು.ಅಂತಹ ಮಹಾನ್ ಪುರುಷರ 157ನೇ ಜಯಂತಿಯನ್ನು ಈ ಬಾರಿ ಮುಂಡರಗಿಯಲ್ಲಿ ಆಚರಿಸುವ ಭಾಗ್ಯ ನಮಗೆ ದೊರೆತಿದ್ದು, ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಜ.ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ಹಾನಗಲ್ಲ ಶ್ರೀಕುಮಾರ ಸ್ವಾಮಿಗಳ 157ನೇ ಜಯಂತಿ ಆಚರಣೆ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯ ಸಮ್ಮುಖ ವಹಿಸಿ ಮಾತನಾಡಿದರು.

ಸೆ.14 ರಿಂದ 24 ರವರೆಗೆ ಪ್ರತಿ ದಿನ ಬೆಳಗ್ಗೆ ಪಟ್ಟಣದ ಒಂದೊಂದು ವಾರ್ಡ್‌ಗಳಿಗೆ ತೆರಳಿ ದುಶ್ಚಟಗಳ ಭಿಕ್ಷೆ,ಸುದ್ಗುಣಗಳ ದೀಕ್ಷೆ ಕಾರ್ಯಕ್ರಮ ನಡೆಸಲಾಗುವುದು. ಅಲ್ಲದೇ ಪ್ರತಿ ದಿನ 2 ಗ್ರಾಮಗಳಿಗೆ ತೆರಳಿ ಅಲ್ಲಿಯೂ ಸಹ ಇದೆ ಕಾರ್ಯಕ್ರಮ ನೆರವೇರಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ರುದ್ರಾಕ್ಷಿ ಧಾರಣೆ ಮಾಡಲಾಗುವುದು. ಸೆ. 24 ರಂದು ಪಟ್ಟಣದಲ್ಲಿ ಸುಮಾರು 101 ಜನ ನಾಡಿನ ವಿವಿಧ ಮಠಗಳ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ತಾಲೂಕಿನ ಎಲ್ಲ ಗ್ರಾಮಗಳ ಗುರು-ಹಿರಿಯರು,ಎಲ್ಲ ಹಂತದ ಜನಪ್ರತಿನಿಧಿಗಳು, ಯುವಕ ಮಿತ್ರರು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಲ್ಲಮಪ್ರಭು ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕುಮಾರ ಶ್ರೀಗಳ ಜಯಂತ್ಯುತ್ಸವವನ್ನು ಪ್ರತಿ ವರ್ಷ ಒಂದು ನಗರ ಹಾಗೂ ಪಟ್ಟಣ ಕೇಂದ್ರವಾಗಿಸಿಕೊಂಡು ಧರ್ಮೋತ್ತೇಜಕ ಪಾದಯಾತ್ರೆ, ಜನ ಜಾಗೃತಿ ಪಥ ಸಂಚಲನ, ವಚನ ಅಭಿಯಾನ ಮತ್ತು ಭಕ್ತರಿಗೆ ಲಿಂಗ-ರುದ್ರಾಕ್ಷಿ ಧರಿಸುತ್ತಾ ದುಶ್ಚಟಗಳ ಭಿಕ್ಷೆ, ಸುದ್ಗುಣಗಳ ದೀಕ್ಷೆ ಆಂದೋಲನ ಮಾಡುತ್ತಾ ವ್ಯಸನಮುಕ್ತ ಸಮಾಜ ನಿರ್ಮಿಸುವುದು ನಮ್ಮ ಸಂಕಲ್ಪವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಕೈಗೊಂಡ ಮಹೋನ್ನತ ಕಾರ್ಯಗಳನ್ನು 20ನೇ ಶತಮಾನದಲ್ಲಿ ಮತ್ತೆ ಮರುಕಳಿಸಿ ದ್ವಿತೀಯ ಬಸವಣ್ಣರೆನಿಸಿದ ಹಾನಗಲ್ಲ ಶ್ರೀಗುರು ಕುಮಾರ ಶಿವಯೋಗಿಗಳ 157ನೇ ಜಯಂತಿಯನ್ನು ಎಲ್ಲರೂ ಸೇರಿ ಅದ್ಧೂರಿಯಿಂದ ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಯುವ ಮುಖಂಡ ಮಿತುನಗೌಡ ಪಾಟೀಲ ಮಾತನಾಡಿ, ಅನ್ನದಾನೀಶ್ವರ ಮಹಾಶಿವಯೋಗಿಗಳ ಸಾನ್ನಿಧ್ಯದಲ್ಲಿ ನಮ್ಮೂರಿನಲ್ಲಿ ಜರುಗಲಿರುವ ಈ ಕಾರ್ಯಕ್ರಮ ನಾವೆಲ್ಲರೂ ಸೇರಿ ತನು-ಮನ-ಧನದಿಂದ ಸಹಾಯ ಸಹಕಾರ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಕೊನೆಯ ದಿನದ ಪ್ರಸಾದ ಸೇವೆ ಶಿವಕುಮಾರಗೌಡ ಪಾಟೀಲ ನೆರವೇರಿಸುವುದಾಗಿ ತಿಳಿಸಿದರು, ₹ 2.51 ಲಕ್ಷ ರೋಣ ಶಾಸಕ ಜಿ.ಎಸ್.ಪಾಟೀಲ, ₹ 1 ಲಕ್ಷ ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ದೇಣಿಗೆ ನೀಡಿದರು.

ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಕರಬಸಪ್ಪ ಹಂಚಿನಾಳ‍, ಎ.ಕೆ. ಬೆಲ್ಲದ, ಆನಂದಗೌಡ ಪಾಟೀಲ, ಎಸ್.ವಿ. ಪಾಟೀಲ, ಬಾಬಣ್ಣ ಶಿವಶಟ್ಟರ, ಡಿ.ಡಿ. ಮೋರನಾಳ, ಆರ್.ಎಲ್. ಪೊಲೀಸ್ ಪಾಟೀಲ, ವೀರನಗೌಡ ಗುಡದಪ್ಪನವರ, ಹನಮಂತಪ್ಪ ಗಡ್ಡದ, ಮುದ್ಲಿಂಗಪ್ಪ ಕೊರ್ಲಹಳ್ಳಿ, ದೇವಪ್ಪ ರಾಮೇನಹಳ್ಳಿ, ಎಸ್.ಎಸ್. ಗಡ್ಡದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಗುರು-ಹಿರಿಯರು ಸಭೆಯಲ್ಲಿ ಉಪಸ್ಥಿತರಿದ್ದರು. ಡಾ. ಬಿ.ಜಿ. ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ರಿತ್ತಿ ನಿರೂಪಿಸಿ, ನಾಗಭೂಷಣ ಹಿರೇಮಠ ವಂದಿಸಿದರು.

Share this article