ಕನ್ನಡಪ್ರಭ ವಾರ್ತೆ ಬೀದರ್
ಫೆ.15ರಂದು ಸಂತ ಸೇವಾಲಾಲ್ ಜಯಂತಿ, ಫೆ.17ರಂದು ಸವಿತಾ ಮಹರ್ಷಿ ಜಯಂತಿ ಹಾಗೂ ಫೆ. 20ರಂದು ಸಂತ ಕವಿ ಸರ್ವಜ್ಞ ಜಯಂತಿಗಳನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸಂತ ಸೇವಾಲಾಲ್ , ಸವಿತಾ ಮಹರ್ಷಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಜಯಂತಿಗಳ ದಿನದಂದು ಎಲ್ಲಾ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಈ ಸಂತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದರು.
ಜಯಂತಿಗಳ ದಿನದಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭವಾಗಿ ನಗರದ ವಿವಿಧ ವೃತ್ತಗಳ ಮೂಲಕ ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರಕ್ಕೆ ಬಂದು ಸೇರಿದ ನಂತರ 12 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿವೆ ಎಂದರು.ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಕುಡಿವ ನೀರಿನ ವ್ಯವಸ್ಥೆ ನಗರ ಸಭೆಯಿಂದ ವ್ಯವಸ್ಥೆ ಮಾಡಬೇಕು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎರಡು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಮೂರು ಜಯಂತಿಗಳನ್ನು ನಿಗದಿಪಡಿಸಿದ ದಿನದಂದು ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುವುದು. ಉಪನ್ಯಾಸಕರ ಹೆಸರುಗಳು ಆಯಾ ಸಮುದಾಯದವರು ಸೂಚಿಸಿದವರಿಗೆ ಆಹ್ವಾನಿಸಲಾಗುವುದು ಎಂದರು.ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ, ವಿಠ್ಠಲ ಕುಂಬಾರ, ಮನೋಹರ ಕುಂಬಾರ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕುಮಾರ, ಗಂಧರ್ವ ಸೇನಾ, ಬನ್ಸಿಧರ್ ರಾಠೋಡ, ಗೋವರ್ಧನ ರಾಠೋಡ ಹಾಗೂ ಕವಿ ಸರ್ವಜ್ಞ ಸಮಾಜದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.ಶಿವಕುಮಾರ ಶೀಲವಂತ ಮಾತನಾಡಿದರು.