ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆ ಕೊಡುಗೆ ಅಪಾರ । ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ನಾಡಿನ ನೆಲ, ಜಲ, ಸಂಸ್ಕೃತಿಯ ವೈಭವವನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ರಾಜ್ಯ ಸರ್ಕಾರ ಬದ್ಧತೆ ಹೊಂದಿದೆ. ಸಮೃದ್ಧ, ಸ್ವಾಭಿಮಾನಿ ಕನ್ನಡ ನಾಡು ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ೬೮ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಜಿಲ್ಲೆಯು ಮಹೋನ್ನತ ಕೊಡುಗೆ ನೀಡಿದ್ದು, ಕನ್ನಡ ನಾಡು ಹಾಗೂ ಭಾಷೆ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿದೆ. ಮೈಸೂರು ರಾಜ್ಯ ಎಂಬ ನಾಮಕರಣ ಬದಲಾಯಿಸಿ ೧೯೭೩ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು ಇದೀಗ ೫೦ ವರ್ಷಗಳು ಪೂರ್ಣಗೊಂಡಿವೆ. ನಮ್ಮ ಸರ್ಕಾರ ಕರ್ನಾಟಕ-೫೦ರ ಸಂಭ್ರಮವನ್ನು ವರ್ಷವಿಡಿ ವಿಶೇಷವಾಗಿ ಆಚರಿಸಲು ಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಆಯ್ಕೆಯಾದ ಹಾವೇರಿಯ ಸತೀಶ ಕುಲಕರ್ಣಿ ಹಾಗೂ ಜಿಲ್ಲಾಡಳಿತ ಸನ್ಮಾನಿಸುತ್ತಿರುವ ಜಿಲ್ಲೆಯ ವಿವಿಧ ಕ್ಷೇತ್ರದ ೧೧ ಸಾಧಕರನ್ನು ಅಭಿನಂದಿಸಿದರು.
ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣದ ಶಕ್ತಿಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ ೨.೧೦ ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ೪೬,೯೧೩ ಅಂತ್ಯೋದಯ ಹಾಗೂ ೩,೪೫,೬೭೦ ಬಿಪಿಎಲ್ ಪಡಿತರ ಕುಟುಂಬದ ಪ್ರತಿ ಸದಸ್ಯರಿಗೆ ತಲಾ ಐದು ಕೆಜಿಯಂತೆ ೪೯.೪೧ ಲಕ್ಷ ಕ್ವಿಂಟಲ್ ಅಕ್ಕಿ ವಿತರಿಸಲಾಗಿದೆ. ತುಂಗಾ ಮೇಲ್ದಂಡೆ ಯೋಜನೆಯಡಿ ಎರಡು ಏತ ನೀರಾವರಿ, 9 ಕೆರೆ ತುಂಬಿಸುವ ಯೋಜನೆಗಳಿಂದ ಜಿಲ್ಲೆಯ ೨೦೫ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿದೆ ಎಂದರು.
ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಇದ್ದರು.
ಸಶಸ್ತ್ರ ಮೀಸಲು ಪಡೆ, ಅರಣ್ಯ ರಕ್ಷಕ ಪಡೆ, ಗೃಹ ರಕ್ಷಕದಳ, ಅಬಕಾರಿ ಇಲಾಖೆ ಪಡೆ, ನಾಗರೀಕರ ರಕ್ಷಣಾ ಪಡೆ, ಎನ್.ಸಿ.ಸಿ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಒಳಗೊಂಡಂತೆ ೧೪ ತಂಡಗಳಿಂದ ಶಿಸ್ತುಬದ್ಧ ಪಥಸಂಚಲನ ಜರಗಿತು. ಪಾರಂಪರಿಕ ಸೊಬಗಿನ ಬಿಳಿ ಕಚ್ಚೆಪಂಚೆ, ಬಿಳಿ ಜುಬ್ಬಾ ಧರಿಸಿದ ಅಧಿಕಾರಿಗಳು ಕನ್ನಡ ನಾಡ ಹಬ್ಬದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.೧೧ ಸಾಧಕರು, ೫೫ ಚಾಲಕರಿಗೆ ಸನ್ಮಾನ:
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದಲ್ಲಿ ಅಪಘಾತ ರಹಿತವಾಗಿ ಚಾಲನೆ ಮಾಡಿದ ೫೫ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ ೧೧ ಮಹನೀಯರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.೧೧ ಸಾಧಕರು: ಸಾಹಿತ್ಯ ಕ್ಷೇತ್ರದಿಂದ ರಾಣಿಬೆನ್ನೂರಿನ ಪ್ರೊ. ಎನ್.ಕೆ. ರಾಮಚಂದ್ರಪ್ಪ, ಸಮಾಜ ಸೇವಾ ಕ್ಷೇತ್ರದಲ್ಲಿ ಬ್ಯಾಡಗಿ ಜೈತುನಬಿ ಸೌದಾಗರ ಹಾಗೂ ಹಾವೇರಿಯ ಅಬ್ದುಲ್‌ಖಾದರ ಧಾರವಾಡ, ಜಾನಪದ ಕಲಾ ವಿಭಾಗದಲ್ಲಿ ಹಾವೇರಿ ತಾಲೂಕು ನಾಗನೂರಿನ ಪುರವಂತಿಕೆ ಸಂಗಮೇಶ ಪರಿಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಶಿಗ್ಗಾಂವಿ ತಾಲೂಕು ತಡಸದ ಗಾಯತ್ರಿ ಪತ್ತಾರ, ವಾದ್ಯ ವಿಭಾಗದಲ್ಲಿ ಹಾನಗಲ್ಲ ತಾಲೂಕು ಬಾಳಂಬೀಡ ಗ್ರಾಮದ ಬಸವರಾಜ ಕೋಳೂರ, ರಂಗಭೂಮಿ ಕ್ಷೇತ್ರದಿಂದ ರಾಣಿಬೆನ್ನೂರು ತಾಲೂಕಿನ ಬೆನಕೊಂಡದ ರೇವಣಪ್ಪ ಮೆಗಳಮನಿ, ನೃತ್ಯ ವಿಭಾಗದಲ್ಲಿ ಶಿಗಾಂವಿಯ ಮಲ್ಲಿಕಾರ್ಜುನ ನಗರದ ಶರಣು ಬಡ್ಡಿ, ಚಿತ್ರಕಲಾ ವಿಭಾಗದಲ್ಲಿ ಗುಡಿಸಲಕೊಪ್ಪದ ಪರಮೇಶ ಬಂಡಿ, ಕರಕುಶಲ ಕ್ಷೇತ್ರದಲ್ಲಿ ಹಾವೇರಿಯ ಅಲ್‌ಹಾಜ್ ಉಸ್ಮಾನ್‌ಸಾಹೇಬ ಪಠವೇಗಾರ ಹಾಗೂ ಸಂಘ-ಸಂಸ್ಥೆ ವಿಭಾಗದಲ್ಲಿ ರಾಣೆಬೆನ್ನೂರಿನ ಅಂಧರ ಜೀವ ಬೆಳಕು ಸಂಸ್ಥೆಗೆ ೨೦೨೩ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.