ಹಾವೇರಿ: ಓದುವುದಕ್ಕೂ ಮತ್ತು ನೋಡುವುದಕ್ಕೂ ವ್ಯತ್ಯಾಸವಿದೆ. ಸಂವೇದನಾಶೀಲತೆಯನ್ನು ಹೆಚ್ಚಿಸುವ ನೋಡುವಿಕೆಯಲ್ಲಿಯೇ ರಸಗ್ರಹಣವನ್ನು ಕಲಾಕೃತಿ ಸೃಷ್ಟಿಸಬೇಕು ಎಂದು ಕಲಾವಿಮರ್ಶಕ ಕೆ.ವಿ. ಸುಬ್ರಮಣ್ಯ ತಿಳಿಸಿದರು.
ಸ್ಥಳೀಯ ನಂದಿ ಲೇಔಟ್‌ನಲ್ಲಿರುವ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ಕಲಾಕೃತಿ ಓದು ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡಿದರು.ಯಾವುದೇ ಕೃತಿ ಇರಲಿ, ಒಂದು ನಿರ್ದಿಷ್ಟ ಅಂತರದಲ್ಲಿ ನೋಡಿ ಆನಂದಿಸಬೇಕು. ಅರಮನೆ, ಗುರುಮನೆ, ದೇವರಮನೆ ಕಲಾಪ್ರಿಯರ ಮನೆಗಳಲ್ಲಿ ಬೇರೆ ಬೇರೆ ರೀತಿಯಾದ ಚಿತ್ರಗಳೇ ಇರಬೇಕು. ಆಗ ಮಾತ್ರ ಅವುಗಳಿಗೆ ಮೌಲ್ಯ ಬರುತ್ತದೆ ಎಂದರು.
ಈ ಚಿತ್ರದಲ್ಲಿ ಏನೋ ಅಡಗಿದೆ ಎಂಬ ಕುತೂಹಲ ಹುಟ್ಟಬೇಕು. ಕಲಾವಿದನ ನಂಬಿಕೆ, ಬದ್ಧತೆ, ಕುಶಲತೆಗಳು ಅದರಲ್ಲಿ ಬಿಂಬಿತವಾಗಿರಬೇಕು. ಒಂದು ನಿಗೂಢ ಕಲಾಕೃತಿ ಐತಿಹಾಸಿಕ ಪ್ರಜ್ಞೆಯ ಜತೆಗೆ ಒಂದು ತಾತ್ವಿಕ ಬದ್ಧತೆಯನ್ನು ಹೊಂದಿದಾಗ ಅದಕ್ಕೊಂದು ಸಾತ್ವಿಕತೆ ಬರಲು ಸಾಧ್ಯ ಎಂದರು.ಲಲಿತಕಲಾ ಅಕಾಡೆಮಿಯ ನೂತನ ಅಧ್ಯಕ್ಷ ಪ.ಸ. ಕುಮಾರ ಮಾತನಾಡಿ, ಅಕಾಡೆಮಿ ಜನಪರವಾದ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರಲ್ಲಿ ಕಲಾಕೃತಿ ಓದು ಒಂದಾಗಿದೆ ಎಂದು ಹೇಳಿ ಭಾವಚಿತ್ರ ತರಬೇತಿ ಕಾರ್ಯಾಗಾರ, ನಿಮ್ಮೊಂದಿಗೆ ನಾವು, ಗ್ರಾಫಿಕ್ ತರಬೇತಿ ಕಾರ್ಯಾಗಾರಾಗಳನ್ನು ಅಕಾಡೆಮಿ ನಡೆಸುತ್ತಿದ್ದು, ಸದ್ಯದಲ್ಲಿ ರಾಜ್ಯದ 31 ಜಿಲ್ಲೆಗಳ ಕಲಾವಿದರನ್ನು ಸೇರಿಸಿ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸಮಾವೇಶ ನಡೆಸುವ ಯೋಜನೆ ಇದೆ ಎಂದರು.
ಕಾರ್ಯಕ್ರಮವನ್ನು ಸಾಹಿತಿ ಸತೀಶ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ, ಚಿತ್ರವೊಂದು ಕಣ್ಣಿಗೆ ತಾಕಬೇಕು, ಇಲ್ಲವೆ ತಡೆದು ನಿಲ್ಲಿಸಬೇಕು. ಸಾಹಿತ್ಯ ವಿಮರ್ಶೆಗೆ ವ್ಯಾಕರಣ ಶಬ್ದ ಸಂಪತ್ತು ಬುನಾದಿಯಾದರೆ, ಚಿತ್ರಕಲೆಗೆ ಬಣ್ಣ ರೇಖೆಗಳೇ ವ್ಯಾಕರಣವಾಗುತ್ತವೆ ಎಂದರು.ಲಲಿತಕಲಾ ಅಕಾಡೆಮಿಯ ಸದಸ್ಯ ಕರಿಯಪ್ಪ ಹಂಚಿನಮನಿ ಮಾತನಾಡಿದರು. ವೇದಿಕೆಯಲ್ಲಿ ಸಾಹಿತಿ ಡಾ. ಧರಣೇಂದ್ರ ಕುರಕುರಿ ಇದ್ದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಕಲಾವಿದರಾದ ಬಹುರೂಪಿ, ಕುಮಾರ ಕಾಟೇನಹಳ್ಳಿ, ಸಿ.ಡಿ. ಜಟ್ಟೆಣ್ಣನವರ, ಎಸ್.ಜೆ. ಚಿತ್ರಗಾರ, ಬಸವರಾಜ ಕಲ್ಲೂರ, ಶಿವರಾಜ, ಎಂ.ಡಿ. ಹೊನ್ನಮ್ಮನವರ, ನಿರ್ಮಲಾ ಹಿಮ್ಮಡಿ, ಡಾವಣಗೇರಿ ಕಲಾಶಾಲೆಯ 12 ವಿದ್ಯಾರ್ಥಿ ಕಲಾವಿದರು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಿರಸಿಯ ತಾರಾನ ಬಳಗದ ಕಲಾ ದಂಪತಿಗಳಾದ ಗ.ಮ. ತುಂಬೆಮನೆ, ಜಯಾ ತುಂಬೆಮನೆ ಹಾಗೂ ಪವಿತ್ರಾ ಹೆಮಟೆಮನೆ ಅವರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು.ಅಕಾಡೆಮಿಯ ಸದಸ್ಯ ವೆಂಕಟೇಶ ಬಡಿಗೇರ ನಿರೂಪಿಸಿದರು. ಶಾಂತಾ ಪ್ರವೀಣ ಕೊಲ್ಲೆ ವಂದಿಸಿದರು.