ಭಯೋತ್ಪಾದನೆ ವಿರುದ್ಧ ಒಂದಾಗಿ ಹೋರಾಡೋಣ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Apr 28, 2025 11:47 PM

ಸಾರಾಂಶ

ಪಹಲ್ಗಾಮ್ ಕೃತ್ಯ ಅತ್ಯಂತ ಹೇಯ ಮತ್ತು ಅಮಾನವೀಯ. ಇದೊಂದು ಮಾನವೀಯತೆಯ ಮೇಲಿನ ದಾಳಿ. ಈ ದಾಳಿಯನ್ನು ನಾವೆಲ್ಲರೂ ಏಕತೆಯಿಂದ ಖಂಡಿಸಬೇಕು.

ಹಾನಗಲ್ಲ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಪೈಶಾಚಿಕ ಕೃತ್ಯದಲ್ಲಿ ಸಾವಿಗೀಡಾದ ಪ್ರವಾಸಿಗರಿಗೆ ತಾಲೂಕಿನ ಅಕ್ಕಿಆಲೂರಿನಲ್ಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಮಿಕರ ವಿಭಾಗದಿಂದ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಪಹಲ್ಗಾಮ್ ಕೃತ್ಯ ಅತ್ಯಂತ ಹೇಯ ಮತ್ತು ಅಮಾನವೀಯ. ಇದೊಂದು ಮಾನವೀಯತೆಯ ಮೇಲಿನ ದಾಳಿ. ಈ ದಾಳಿಯನ್ನು ನಾವೆಲ್ಲರೂ ಏಕತೆಯಿಂದ ಖಂಡಿಸಬೇಕಿದ್ದು, ಒಗ್ಗಟ್ಟಿನಿಂದ ಎದುರಿಸಬೇಕಿದೆ. ಮನುಷ್ಯತ್ವವೇ ಇಲ್ಲದವರ ಈ ಕೃತ್ಯದಿಂದ ಅಮಾಯಕ ಜೀವಗಳು ಬಲಿಯಾಗಿರುವುದು ನೋವಿನ ಸಂಗತಿ. ಭೇದ ಭಾವವಿಲ್ಲದೇ ಇಡೀ ದೇಶದ ಜನ ಭಯೋತ್ಪಾದನೆ ವಿರುದ್ಧ ಒಂದಾಗಿ ಹೋರಾಡಬೇಕಿದೆ ಎಂದರು.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಕೆಪಿಸಿಸಿ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ ಕಚವಿ, ಉಪಾಧ್ಯಕ್ಷ ಬಂಗಾರೆಪ್ಪ ಹರಿಜನ, ಪ್ರಧಾನ ಕಾರ್ಯದರ್ಶಿ ಮಾರುತಿ ಹಂಜಗಿ, ತಾಲೂಕಾಧ್ಯಕ್ಷ ಮಂಜುನಾಥ ದೊಡ್ಡಮನಿ, ಅಕ್ಕಿಆಲೂರು ಬ್ಲಾಕ್ ಅಧ್ಯಕ್ಷ ಗುಂಡಪ್ಪ ಹರಿಜನ, ತಾಪಂ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಶೇಷಗಿರಿ, ಶಿವಬಸಪ್ಪ ಪೂಜಾರ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಮುಖಂಡರಾದ ಭರಮಣ್ಣ ಶಿವೂರ, ಗೀತಾ ಪೂಜಾರ, ಸತ್ತಾರಸಾಬ ಅರಳೇಶ್ವರ, ಯಾಸೀರ್‌ಅರಾಫತ್ ಮಕಾನದಾರ ಇದ್ದರು.ನಾಳೆ ಬಸವ ಜಯಂತಿ ಕಾರ್ಯಕ್ರಮ

ಹಾವೇರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ, ತಾಲೂಕು ಘಟಕಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಏ. 30ರಂದು ಬೆಳಗ್ಗೆ 10 ಗಂಟೆಗೆ ಬಸವೇಶ್ವರ ಮತ್ತು ದಾರ್ಶನಿಕರ ಜಯಂತಿ ಕಾರ್ಯಕ್ರಮವನ್ನು ದಾನೇಶ್ವರಿ ನಗರದಲ್ಲಿರುವ ಪದವಿಪೂರ್ವ ಕಾಲೇಜು ನೌಕರರ ಸಂಘದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಹೊಸಮಠದ ಬಸವ ಶಾಂತಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್ ಅಧ್ಯಕ್ಷತೆ ವಹಿಸುವರು. ಚನ್ನಪ್ಪ ಕುನ್ನೂರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಅವರು ಬಸವೇಶ್ವರ ಬಗ್ಗೆ ಹಾಗೂ ಹಿರೇಕೆರೂರು ಬಿ.ಆರ್. ತಂಬಾಕದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಸಿ. ಮಠದ ರೇಣುಕಾಚಾರ್ಯ ಬಗ್ಗೆ ಉಪನ್ಯಾಸ ನೀಡುವರು. ಶರಣ ಶರಣೆಯರ ಬಗ್ಗೆ ಜಗದೀಶ ಹತ್ತಿಕೋಟಿ ಮಾತನಾಡುವರು.ಇದೇ ವೇಳೆ ದ್ರಾಕ್ಷಾಯಿಣಿ ಗಾಣಿಗೇರ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಬಸವೇಶಗೌಡ್ರ ಪಾಟೀಲ, ಪ್ರಕಾಶ ಬನ್ನಿಹಟ್ಟಿ ಅವರನ್ನು ಸನ್ಮಾನಿಸಲಾಗುವುದು. ವಚನ, ರಂಗೋಲಿ ಮತ್ತು ಕವನ ವಾಚನ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದವರಿಗೆ ಪ್ರಶಸ್ತಿ ವಿತರಿಸುವರು ಎಂದು ಪ್ರಕಟಣೆ ತಿಳಿಸಿದೆ.

Share this article