ಶಿವಾಜಿ ಪ್ರೇರಣೆ ಪಡೆದು ಸಮಾಜ ಕಟ್ಟೋಣ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Feb 20, 2024 1:45 AM

ಸಾರಾಂಶ

ಶಿವಾಜಿ ಮಹಾರಾಜರು ತಮ್ಮ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿ ಅವರೊಬ್ಬ ಆದರ್ಶ ರಾಜ, ಪ್ರಜೆಗಳ ರಾಜ ಆಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಹೇಳಿದರು. ಬೀದರ್‌ನಲ್ಲಿ ಜಿಲ್ಲಾಡಳಿತ. ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಶಿವಾಜಿ ಮಹಾರಾಜರಂಥ ಮಹಾಪುರುಷರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಮತ್ತು ಅವರ ಪ್ರೇರಣೆ ಪಡೆದು ನಾವು ಸಮಾಜವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ನುಡಿದರು.

ಸೋಮವಾರ ಜಿಲ್ಲಾಡಳಿತ. ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರ ಕಂಡ ಮಹಾಪುರುಷ ಶಿವಾಜಿ ಮಹಾರಾಜ ಆಗಿದ್ದರು. ಅವರು ಚಿಕ್ಕಂದಿನಲ್ಲಿಯೇ ತಮ್ಮ ತಾಯಿ ಜಿಜಾಬಾಯಿಯವರಿಂದ ರಾಮಾಯಣ, ಮಹಾಭಾರತ ಕಲಿತು ರಾಷ್ಟ್ರೀಯತೆಯ ಪ್ರೇಮ ಅವರಲ್ಲಿ ಮೂಡಿತ್ತು. ಶಿವಾಜಿ ಮಹಾರಾಜರು ತಮ್ಮ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿ ಅವರೊಬ್ಬ ಆದರ್ಶ ರಾಜ, ಪ್ರಜೆಗಳ ರಾಜ ಆಗಿದ್ದರು ಎಂದು ಹೇಳಿದರು.

ಗಡಿ ಭಾಗದಲ್ಲಿ ಮರಾಠಿಗರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ:

ಗಡಿ ಭಾಗದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಪರಸ್ಪರ ಸಹೋದರತೆಯಿಂದ ಇದ್ದೇವೆ. ಗಡಿ ಭಾಗದಲ್ಲಿ ಮರಾಠಿಗರ ಅಭಿವೃದ್ಧಿಗಾಗಿ ಸರ್ಕಾರ ಒತ್ತು ನೀಡುತ್ತಿದೆ. ಮರಾಠ ಅಭಿವೃದ್ಧಿ ನಿಗಮಕ್ಕೆ ಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ಶಿವಾಜಿ ಮಹಾರಾಜರ ಕನಸು ಅಖಂಡ ಭಾರತ ಐಕ್ಯತೆಯಿಂದ ಕೂಡಿರಬೇಕು ಎಂಬುವದಾಗಿತ್ತು. ಹಾಗಾಗಿ ನಾವೆಲ್ಲರು ಐಕ್ಯತೆಯಿಂದ ಇರುವ ಮೂಲಕ ಅವರ ಕನಸನ್ನು ನನಸಾಗಿಸೋಣ ಎಂದರು.

ಪೌರಾಡಳಿತ ಮತ್ತು ಹಜ್‌ ಸಚಿವ ರಹೀಮ್‌ಖಾನ್‌ ಮಾತನಾಡಿ, ಶಿವಾಜಿ ಮಹಾರಾಜರು ಮಾನವೀಯತೆಗಾಗಿ ಹೋರಾಡಿದ್ದರು. ಅವರು ಸಮಾಜದ ಜನರಲ್ಲಿ ಯಾವುದೇ ಭೆದ ಭಾವ ಮಾಡಿರಲಿಲ್ಲ. ದೊಡ್ಡ ದೊಡ್ಡ ವಿಚಾರ ಮತ್ತು ಮನಸ್ಸಿನ ವ್ಯಕ್ತಿಗಳು ಮಹಾತ್ಮರಾಗುತ್ತಾರೆ ಎಂದರು.

ಶಿವ ವ್ಯಾಖ್ಯಾನ ಮತ್ತು ಸಮಾಜ ಪ್ರಭೋಧನಕಾರಿ ಉದಗೀರನ ಶಿವಶ್ರೀ ಪ್ರಾ. ಸಿದ್ದೇಶ್ವರ ಭಾನುದಾಸ್‌ ಲಾಂಗಡೇ ಅವರು ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿ, ಶಿವಾಜಿ ಮಹಾರಾಜರ ಸಾಮ್ರಾಜ್ಯ ಬಹುಜನರ ರಾಜ್ಯವಾಗಿದೆ. ಎಲ್ಲಾ ಧರ್ಮಿಯರು ಅವರಲ್ಲಿದ್ದರು. ಅವರ ವಕೀಲ ಖಾಜಿ ಹೈದರ್ ಮತ್ತು ಅಂಗ ರಕ್ಷಕರು ಮುಸ್ಲಿಂಮರಾಗಿದ್ದರು. ರೈತರಿಗೆ ಯಾವುದೇ ತೆರಿಗೆ ಹೇರದೆ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದರು. ಹಾಗಾಗಿ ಅವರನ್ನು ರೈತರ ರಾಜ ಎಂದು ಕರೆಯುತ್ತಾರೆ. ಶಿವಾಜಿ ಮಹಾರಾಜ ಲೋಕ ಕಲ್ಯಾಣಕ್ಕಾಗಿ ರಾಷ್ಟ್ರೀಯವಾದಿಯಾಗಿದ್ದರು ಎಂದು ಹೇಳಿದರು.

ಶಿವಾಜಿ ಮಹಾರಾಜ ಭಾವಚಿತ್ರದ ಭವ್ಯ ಮೆರವಣಿಗೆ:

ಬೀದರ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ. ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಮ್‌ಖಾನ್‌, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೇರಿದಂತೆ ಇತರೆ ಗಣ್ಯರು ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬೀದರ್‌ ನಗರ ಸಭೆ ಅಧ್ಯಕ್ಷರಾದ ಮಹ್ಮದ ಗೌಸ್‌. ಜಿಲ್ಲಾಧಿಕಾರಿ ಗೋವಿಂದರೆಡ್ಡಿ. ಜಿಪಂ ಸಿಇಒ ಡಾ. ಗಿರೀಶ ದಿಲೀಪ ಬದೊಲೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಛತ್ರಪತಿ ಶಿವಾಜಿ ಮಹಾರಾಜ ಉತ್ಸವ ಸಮಿತಿ ಅಧ್ಯಕ್ಷರಾದ ಅನಿಲ ಕಾಳೆ. ಆನಂದ ದೇವಪ್ಪ. ಅಮೃತರಾವ್‌ ಚಿಮಕೋಡೆ. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಸೇರಿದಂತೆ ಮರಾಠಾ ಸಮಾಜದ ಹಲವಾರು ಜನ ಉಪಸ್ಥಿತರಿದ್ದರು.

Share this article