ಕನ್ನಡಪ್ರಭ ವಾರ್ತೆ ನಿಡಗುಂದಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಪರವಾಗಿ ಕೆಲಸ ಮಾಡುವ ಏಕೈಕ ಪಕ್ಷ ಬಿಜೆಪಿ. ದೇಶದ ಅಭಿವೃದ್ಧಿಯನ್ನೇ ಧ್ಯೇಯವಾಗಿ ಇಟ್ಟುಕೊಂಡು ವಿಕಸಿತ ಹಾಗೂ ಸುಭದ್ರ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಮೋದಿಯವರ ಕೈ ಬಲಪಡಿಸಲು ಪಕ್ಷದ ಸದಸ್ಯರನ್ನು ಹೆಚ್ಚಿಸೋಣ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು.ಪಟ್ಟಣದ ರುದ್ರೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಒಂದು ವರ್ಷದ ಆಡಳಿತದಲ್ಲೇ 3 ಪ್ರಮುಖ ಹಗರಣದ ಆರೋಪಕ್ಕೆ ಗುರಿಯಾಗಿದೆ. ಹೀಗಾಗಿ ಜನರಿಗೆ ನಮ್ಮ ಪಕ್ಷದ ಬಗ್ಗೆ ಸ್ಪಷ್ಟತೆಯಿದೆ. ಅಭಿಯಾನದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾದಷ್ಟು ಮುಂಬರುವ ಸ್ಥಳೀಯ ಚುನಾವಣೆ ಎದುರಿಸಲು ಸಹಕಾರಿಯಾಗಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಲು ಮುಂದಾಗಬೇಕು. ಕಳೆದೆರಡು ಬಾರಿ ರಾಜ್ಯದಲ್ಲೇ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಲಾಗಿದೆ ಎಂದರು.ಡಾ.ಸಂಗಮೇಶ ಗೂಗಿಹಾಳ ಮಾತನಾಡಿ, ಕಳೆದ ಹತ್ತು ವರ್ಷದಲ್ಲಿ ಬಿಜೆಪಿ ಸದಸ್ಯತ್ವದಲ್ಲಿ ಹೆಚ್ಚಳವಾಗಿ ಬಿಜೆಪಿ ವಿಶ್ವದ ಅತೀ ದೊಡ್ಡ ಪಕ್ಷವಾಗಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡುವ ಮೂಲಕ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕು. ಸ್ಥಳೀಯ ಚುನಾವಣೆ ದೃಷ್ಟಿ ಇಟ್ಟುಕೊಂಡು ಹೆಚ್ಚಿನ ಸದಸ್ಯತ್ವದ ಗುರಿ ಹೊಂದಿ ಮನೆ ಮನೆಗೆ ತೆರಳಿ ಸದಸ್ಯತ್ವ ಮಾಡಬೇಕು. ನಿಡಗುಂದಿಯ ಪ್ರತಿ ವಾರ್ಡ್‌ಗಳಲ್ಲಿ ಕನಿಷ್ಠ 5 ಜನ ಕಾರ್ಯಕರ್ತರಿಗೆ ಸದಸ್ಯತ್ವ ಉಸ್ತುವಾರಿ ಹೊಣೆ ನೀಡಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ನರೇಂದ್ರ ಮೋದಿಯವರ ಕಾರ್ಯಗಳನ್ನು ಮನವರಿಕೆ ಮಾಡಿ ಹೆಚ್ಚಿನ ಸದಸ್ಯತ್ವ ಮಾಡಬೇಕು ಎಂದು ಮನವಿ ಮಾಡಿದರು.ಬಾಲಚಂದ್ರ ನಾಗರಾಳ, ಅಶೋಕ ಉಳ್ಳಿ, ಸಂತೋಷ ಕಡಿ, ನಾಗರಾಜ ಚಲಮರದ, ಪರಶುರಾಮ ಹುಲ್ಯಾಳ, ಮಹಾಂತೇಶ ಚಲಮರದ, ಪರಶುರಾಮ ಸಣ್ಣಬಿಳಗಿ, ಬಸವರಾಜ ದಂಡಿನ, ರಾಜು ನದಾಪ್, ಶರಣು ಮುರನಾಳ, ಮುತ್ತು ಕಾಜಗಾರ, ಶಿವಪ್ಪ ಸಜ್ಜನ ಸೇರಿದಂತೆ ಇತರರಿದ್ದರು.