ಹಿಂದೂ ಸಮಾಜ ನಿರ್ಮಾಣದ ಕನಸು ಕಂಡಿದ್ದ ಶಿವಾಜಿ ಅಗಾಧ ದೇಶಪ್ರೇಮ ಬೆಳೆಸಿಕೊಂಡಿದ್ದರು
ಕುಷ್ಟಗಿ: ಹಿಂದೂ ಸಮಾಜ ನಿರ್ಮಾಣದ ಕನಸು ಹೊತ್ತ ಛತ್ರಪತಿ ಶಿವಾಜಿಯ ಹೋರಾಟದ ಕಲ್ಪನೆ ನಾವೆಲ್ಲರೂ ಮೈಗೂಡಿಸಿಕೊಂಡು ಹಿಂದೂ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಹಡಪದ ಹೇಳಿದರು.
ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹಿಂದೂ ಸಮಾಜ ನಿರ್ಮಾಣದ ಕನಸು ಕಂಡಿದ್ದ ಶಿವಾಜಿ ಅಗಾಧ ದೇಶಪ್ರೇಮ ಬೆಳೆಸಿಕೊಂಡಿದ್ದರು. ಹಿಂದೂಗಳ ಕಣ್ಮಣಿಯಾದ ಶಿವಾಜಿ ಮಹಿಳೆಗೆ ವಿಶೇಷ ಸ್ಥಾನಮಾನ, ಗೌರವ ನೀಡುತ್ತಿದ್ದರು. ಧಾರ್ಮಿಕ ಸಹಿಷ್ಣುಗಳಾಗಿದ್ದ ಅವರು ತಮ್ಮ ಸಾಮ್ರಾಜ್ಯದಲ್ಲಿ ವಿವಿಧ ಧರ್ಮೀಯರನ್ನು ಸಹಿತ ಗೌರವದೊಂದಿಗೆ ಕಾಣುತ್ತಿದ್ದರು ಎಂದರು.
ರವೀಂದ್ರ ಬಾಕಳೆ ಮಾತನಾಡಿ, ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲೆ ಹೋರಾಟಕ್ಕಿಳಿದು ಹಿಂದೂ ಸಮಾಜದ ರಕ್ಷಣೆಗೆ ನಿಂತ ಮಹಾನ್ ಚೈತನ್ಯ ಶಿವಾಜಿ ಮಹಾರಾಜರು ಎಂದರು.
ವೀರೇಶ ಬಂಗಾರಶೆಟ್ಟರ ಮಾತನಾಡಿ, ಹಿಂದು ಸಮಾಜದ ಸ್ಥಾಪನೆಗೆ ಶ್ರಮಿಸಿದ ಅಪ್ರತಿಮ ಹೋರಾಟಗಾರರು, ಸುಲ್ತಾನರು, ಮೊಘಲರು, ಪರಕೀಯರು, ಇಸ್ಲಾಮಿಕ್ ದಾಳಿಗಳು, ಅಧರ್ಮಿಯರ ವಿರುದ್ಧ ಸಿಡಿದೆದ್ದ ಮಹಾರಾಜರು ಶಿವಾಜಿಯವರು. ಕಡಿಮೆ ಸೈನಿಕರಿದ್ದರೂ ಯುದ್ಧ ನೈಪುಣ್ಯತೆಯಲ್ಲಿ ಭಾರತದ ರಾಜರುಗಳಲ್ಲಿ ಹೆಚ್ಚಿನ ವಿರೋಧಿ ಸೆದೆಬಡಿಯುವ ಕಲೆ ಹೊಂದಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೆಡ್-2 ತಹಸೀಲ್ದಾರ ರಜನಿಕಾಂತ ಕೆಂಗೇರಿ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ವಿವಿಧ ಸಮಾಜದ ಮುಖಂಡರಾದ ಎ.ವೈ.ಲೋಕರೆ, ಬಸನಗೌಡ ಪಾಟೀಲ, ಡಾ. ರವಿಕುಮಾರ ದಾನಿ, ಎನ್.ಎಸ್.ಗೋರ್ಪಡೆ, ವೀರೇಶ ಬಂಗಾರಶೆಟ್ಟರ, ಧರ್ಮಣ್ಣ ಚವಟೆ, ರಮೇಶ ಕಾಪ್ಸೆ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು. ಶರಣಪ್ಪ ಹುಡೇದ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.