ದಾಬಸ್‍ಪೇಟೆ: ದೇಶಕ್ಕಾಗಿ ಸೈನಿಕರು, ಅನ್ನಕ್ಕಾಗಿ ರೈತರು ಎಷ್ಟು ಮುಖ್ಯಮೋ ಹಾಗೆ ಕರುನಾಡಿಗಾಗಿ ಕನ್ನಡಪರ ಸಂಘಟನೆಗಳು, ಹೋರಾಟಗಾರರು ಅಷ್ಟೇ ಮುಖ್ಯವಾಗಿದ್ದು ತಾಯಿ ಹಾಗೂ ತಾಯ್ತಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂದು ಕರುನಾಡ ವಿಜಯಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್ ತಿಳಿಸಿದರು.
ಜಿಲ್ಲಾಧ್ಯಕ್ಷ ಸುಚೀಂದ್ರ.ಎಸ್ ಮಾತನಾಡಿ, ಬೃಹತ್ ಕೈಗಾರಿಕಾ ವಲಯವಾಗಿ ಬೆಳೆಯುತ್ತಿರುವ ಸೋಂಪುರ ಭಾಗದಲ್ಲಿ ನಮ್ಮ ಕನ್ನಡಿಗರಿಗೆ ಕೆಲಸ ನೀಡದೆ ಅನ್ಯ ರಾಜ್ಯದವರನ್ನು ಕರೆತಂದು ಕಂಪನಿಗಳಲ್ಲಿ ಕೆಲಸ ನೀಡಿದ್ದು ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಇಂತಹ ಪ್ರಾದೇಶಿಕ ವಿಚಾರಗಳಲ್ಲಿ ಮುಖಂಡರು ಜನರ ಧ್ವನಿಯಾಗಿ ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾತಿನಿಧ್ಯ ನೀಡುವಂತೆ ಎಲ್ಲಾ ಕಂಪನಿಗಳಿಗೆ ತಿಳಿಸಬೇಕಿದೆ ಎಂದರು.
ಸಂಘಟನೆಯ ತಾಲೂಕು ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ವರುಣನ ಕೃಪೆಯಿಂದ ಕಾರ್ಯಕ್ರಮ ತಡವಾಗಿ ಆರಂಭವಾಯಿತಾದರೂ ಸಂಗೀತ ಕಾರ್ಯಕ್ರಮಕ್ಕೆ ಜನ ಮನಸೋತು, ಮಳೆಯ ನಡುವೆಯೂ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಯುವಕರು ಸಂಘಟಿತರಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳಿಗೆ ಮುಕ್ತಿ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ವಿಜಯಸೇನೆಯ ಪದಾಧಿಕಾರಿಗಳು ವರ್ಷದ 365 ದಿನಗಳೂ ಸಂಘಟನೆಯಲ್ಲಿ ತೊಡಗಿ ರಾಜ್ಯದ ಪ್ರಗತಿಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಂಚೇಮನೆ ವಿನಯ್, ತಾಲೂಕು ಅಧ್ಯಕ್ಷ ವಸಂತಕುಮಾರ್, ಹೋಬಳಿ ಅಧ್ಯಕ್ಷ ಭರತ್, ಜಿಲ್ಲಾ ಗೌರವಾಧ್ಯಕ್ಷರಾದ ಜಗಜ್ಯೋತಿಬಸವೇಶ್ವರ, ಎಚ್.ಪಿ.ಸುರೇಶ್, ರಾಜ್ಯ ಸಂಚಾಲಕ ವಿಜಯ್‍ಕುಮಾರ್, ಕಾರ್ಯಾಧ್ಯಕ್ಷ ಹರೀಶ್ ಕುಮಾರ್, ಪದಾಧಿಕಾರಿಗಳಾದ ಚಂದನ್, ಚೇತನ್, ಮಾರುತಿ, ಲಿಂಗರಾಜು ಸೇರಿದಂತೆ ಐದಾರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಪೋಟೋ 2 :ದಾಬಸ್‍ಪೇಟೆ ಪಟ್ಟಣದಲ್ಲಿ ಸೋಂಪುರ ಕರುನಾಡ ವಿಜಯಸೇನೆ ಸಂಘಟನೆಯಿಂದ ಕನ್ನಡದ ಹಬ್ಬ ಸುಗ್ಗಿ ಸಂಭ್ರಮ ಕಾರ್ಯಕ್ರಮ ಹಾಗೂ ಪ್ರಖ್ಯಾತ ಗಾಯಕ ರಾಜೇಶ್ ನಾರಾಯಣ್ ಅವರನ್ನು ಕರುನಾಡ ವಿಜಯಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್ ಹಾಗೂ ಪದಾಧಿಕಾರಿಗಳು ಅಭಿನಂದಿಸಿದರು.