ಕಲ್ಯಾಣ ರಾಷ್ಟ್ರದ ಕನಸು ಸಾಕಾರಗೊಳಿಸೋಣ: ದೇಶಪಾಂಡೆ

KannadaprabhaNewsNetwork |  
Published : Apr 21, 2026, 02:45 AM IST
20ಎಚ್.ಎಲ್.ವೈ-1(ಎ): ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ ಬಸವ ಜಯಂತಿ ಸಮಾರಂಭದಲ್ಲಿ ಹಿರಿಯ ಶಾಸಕ ಆರ್.ವಿ.ದೇಶಪಾಂಡೆಯವರು ಬಸವ ಪಥ ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಿದರು.  | Kannada Prabha

ಸಾರಾಂಶ

ಜಗತ್ತು ಇಂದು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವು ಬಸವಣ್ಣನವರ ತತ್ವ-ಸಂದೇಶಗಳ ಪಾಲನೆಯಲ್ಲಿದೆ.

ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ

ಕನ್ನಡಪ್ರಭ ವಾರ್ತೆ ಹಳಿಯಾಳ

ಜಗತ್ತು ಇಂದು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವು ಬಸವಣ್ಣನವರ ತತ್ವ-ಸಂದೇಶಗಳ ಪಾಲನೆಯಲ್ಲಿದೆ. ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆಯುವ ಮೂಲಕ ನಾವು ಅವರು ಕಂಡ ಕಲ್ಯಾಣ ರಾಷ್ಟ್ರದ ಸಮಾನತೆಯ ಕನಸನ್ನು ಸಾಕಾರಗೊಳಿಸೋಣ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಸೋಮವಾರ ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ ಬಸವ ಜಯಂತಿ-2026ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಸವಣ್ಣನವರ ತತ್ವಗಳು ಕೇವಲ ಒಂದೇ ಜಾತಿಗೆ ಸೀಮಿತವಾಗದೇ ಅವು ಇಡೀ ವಿಶ್ವಕ್ಕೆ ಅನ್ವಯಿಸುತ್ತವೆ. 21ನೇ ಶತಮಾನದಲ್ಲಿ ಒಂದೆಡೆ ಆವಿಷ್ಕಾರ, ಸಂಶೋಧನೆಗಳ ಮಧ್ಯೆ ಮಾನವ ಮಾತ್ರ ಅಭಿವೃದ್ಧಿ ಹೊಂದುವ ಬದಲು ದುಷ್ಟಶಕ್ತಿಗಳಿಂದ ಜರ್ಜರಿತನಾಗಿ, ರಾಕ್ಷಸನಾಗುತ್ತಿದ್ದಾನೆ. ಇದು ಸರಿಯಾದ ಬೆಳವಣಿಗೆಯಲ್ಲ. ಮಾನವ ದಾನವನಾಗುವ ಬದಲು ಮಹಾದೇವನಾಗಬೇಕು, ಮಾನವನನ್ನು ಮಹಾದೇವನಾಗಿ ಪರಿವರ್ತಿಸುವ ಶಕ್ತಿಯು ಬಸವಣ್ಣನವರ ಸಂದೇಶಗಳಲ್ಲಿವೆ. ಅವರ ತತ್ವಗಳು ನಮಗೆ ಸದಾ ಪ್ರೇರಣಾದಾಯಕವಾಗಿವೆ ಎಂದರು.

ರಾಜ್ಯ ಸರ್ಕಾರದ ನಿವೃತ್ತ ಅಧೀನ ಕಾರ್ಯದರ್ಶಿ ಎಂ.ಜಿ. ಮುಳಕೂರ ಬಸವಣ್ಣನವರ ಕುರಿತು ಉಪನ್ಯಾಸ ನೀಡಿ, ವಿಶ್ವಗುರು ಬಸವಣ್ಣನವರು ಇಂದು ಜಾಗತಿಕ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಪ್ರಶ್ನೆ, ಪ್ರತಿಭಟನೆ ಹಾಗೂ ಪರ್ಯಾಯ ವ್ಯವಸ್ಥೆ ಈ ಮೂರು ತತ್ವಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಆರಂಭಿಸಿದರು. ನಿತ್ಯ ಕಾಯಕ ಮಾಡು, ಕಾಯಕದ ಮೂಲಕ ದೇವರನ್ನು ಕಾಣು, ದಾಸೋಹದ ಮೂಲಕ ಗಳಿಸಿದನ್ನು ಹಂಚಿ ಸಂತೃಪ್ತಿಯ ಬದುಕನ್ನು ಸಾಗಿಸು ಎಂಬ ಉದಾತ್ತ ವಿಚಾರಗಳನ್ನು ಸಾರಿ ಅದರಂತೆ ನಡೆದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯನ್ನು ತೋರಿಸಿದ ಬಸವಣ್ಣನವರು ಪುರುಷರಿಗೆ ಸಮಾನರಾಗಿ ಮಹಿಳೆಯರಿಗೂ ಸ್ಥಾನಮಾನ ಕೊಡುವ ಅವಶ್ಯಕತೆ ಹಿಂದೆಯೇ ಸಾರಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಮಾತನಾಡಿ, ಬಸವಣ್ಣನವರ ಹಾಗೆಯೇ ಧರ್ಮ ಭೋಧನೆಯನ್ನು ಅತ್ಯಂತ ಸರಳವಾಗಿ ಅರ್ಥವಾಗುವ ಹಾಗೇ ಯಾರೂ ಮಾಡಲಿಲ್ಲ. ಅವರ ಆಚಾರ-ವಿಚಾರಗಳು ಕೇವಲ ಜಯಂತಿಗೆ ಮಾತ್ರ ಸೀಮಿತವಾಗಿರಬಾರದು. ಇಂದು ಪ್ರತಿಯೊಬ್ಬರೂ ಧರ್ಮ, ಜಾತಿ ಮತ್ತು ಭಕ್ತಿಯನ್ನು ತೋರಿಕೆಗೆ ಮಾತ್ರ ಮಾಡುತ್ತಿದ್ದೆವೆ. ಬಸವಣ್ಣನವರು ಕಾಯಕಕ್ಕೆ ಮೊದಲ ಆದ್ಯತೆ ನೀಡಿ, ಕಾಯಕ ಮಾಡು ಬಂದ ಫಲವನ್ನು ಬಡವರಲ್ಲಿ ಶೋಷಿತರಲ್ಲಿ ಹಂಚಿಕೊಂಡು ಬದುಕು ಎಂಬ ಮಾದರಿ ಶ್ರೇಷ್ಠ ಮಾರ್ಗವನ್ನು ತೋರಿದರು ಎಂದರು.

ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು.

ಭವ್ಯ ಮೆರವಣಿಗೆ:

ಸಭಾ ಕಾರ್ಯಕ್ರಮಕ್ಕೂ ಸಾರ್ವಜನಿಕರು ಶಾಸಕರನ್ನು ಸಿಂಗರಿಸಿದ ಎತ್ತುಗಳ ಮೆರವಣಿಗೆಯಲ್ಲಿ ತಾಲೂಕಾಡಳಿತ ಸೌಧಕ್ಕೆ ಕರೆತಂದರು. ತಾಲೂಕಾಡಳಿತ ಸೌಧಕ್ಕೆ ಆಗಮಿಸಿದ ಶಾಸಕರು ಡೊಳ್ಳು ವಾದ್ಯವನ್ನು ಕಟ್ಟಿಕೊಂಡು ಡೊಳ್ಳು ಕುಣಿತದವರೊಂದಿಗೆ ಕುಣಿದು ಸಂಭ್ರಮಿಸಿದರು.

ಬಸವ ಪಥ ಬಿಡುಗಡೆ:

ಕಾರ್ಯಕ್ರಮದಲ್ಲಿ ಬಸವಾದಿ ಶರಣರ ಬದುಕು ಮತ್ತು ಸಂದೇಶಗಳ ಪ್ರಸಾರಕ್ಕಾಗಿ ಮೀಸಲಾಗಿಟ್ಟಿರುವ ಮಾಸಿಕ ಪತ್ರಿಕೆ ಬಸವ ಪಥವನ್ನು ಶಾಸಕ ದೇಶಪಾಂಡೆ ಬಿಡುಗಡೆ ಮಾಡಿದರು. ಗಾಯಕಿ ಮಹಾನಂದ ಗೋಸಾವಿಯವರು ವಚನ ಗಾಯನ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಲಿಂಗಾಯತ ಪ್ರಮುಖರಾದ ರವಿ ತೋರಣಗಟ್ಟಿ, ಶಿವು ದೇಸಾಯಸ್ವಾಮಿ, ಬಸವರಾಜ್ ಬೆಂಡಿಗೇರಿಮಠ, ಶಿವು ಶೆಟ್ಟರ್, ಲಿಂಗರಾಜ್ ಹಿರೇಮಠ, ಬಸವರಾಜ್ ಗಾಣಿಗೇರ್ ಹಾಗೂ ಇತರರು ಇದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪ್ಪೂರು ನದಿಕೊರೆತ ಪ್ರದೇಶಕ್ಕೆ ಶಾಸಕ ಯಶ್ ಪಾಲ್ ಭೇಟಿ
ಅಗ್ನಿ ಅವಘಡಗಳಿಗೆ ಸುರಕ್ಷತಾ ಕ್ರಮ ತಿಳಿದುಕೊಳ್ಳುವುದು ಅವಶ್ಯಕ: ಲಕ್ಷ್ಮಿಕುಮಾರ್