ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಪಟ್ಟಣದ ಹೊರವಲಯದಲ್ಲಿ ಪದವೀಧರರು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ರಾಘವೇಂದ್ರ, ಇದೊಂದು ಮಹತ್ವದ ಚುನಾವಣೆ ಆಗಿದ್ದು, ಈ ಭಾಗದಲ್ಲಿ ನೋಂದಣಿ ಆದಂತಹ ಪದವೀಧರರು ಹಾಗೂ ಶಿಕ್ಷಕರನ್ನು ಸಂಪರ್ಕಿಸಿ ಪ್ರತಿ ೨೫ ಮತದಾರರಿಗೆ ಒಬ್ಬರು ಪ್ರಮುಖರನ್ನು ಗುರುತಿಸಿ ಜವಾಬ್ದಾರಿ ಕೊಟ್ಟು ಚುನಾವಣೆ ವ್ಯವಸ್ಥಿತವಾಗಿ ನಡೆಸಬೇಕಿದೆ ಎಂದರು.
ಈ ಬಾರಿ ಪದವೀಧರರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿ ರಘುಪತಿ ಭಟ್ ಸ್ಪಧಿರ್ಸುತ್ತಿದು, ಅವರನ್ನು ಮಾಜಿ ಸಚಿವ ಈಶ್ವರಪ್ಪ ಸೇರಿ ಹಲವರು ಬೆಂಬಲಿಸುತ್ತಿದ್ದಾರೆ. ಆದರೆ ನಾವು ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹೆಸರಾಂತ ತಜ್ಞ ವೈದ್ಯ ಡಾ. ನಂಜಯ ಸಜಿರ್ ಅವರನ್ನು ಘೋಷಣೆ ಮಾಡಿದ್ದು ಅವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ.ಈ ಹಿಂದೆ ಆಯನೂರ ಮಂಜುನಾಥರನ್ನು ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸೇರಿ ಎಲ್ಲಡೆ ಪಕ್ಷದ ಟಿಕೆಟ್ ಕೊಟ್ಟು ಗೆಲ್ಲಿಸಲಾಗಿತ್ತು, ಆದರೆ ಬಿಜೆಪಿಯಿಂದ ಎಲ್ಲ ಸವಲತ್ತು ಪಡೆದ ಅವರು ಇಂದು ನಮ್ಮ ಎದುರಾಳಿ ಆಗಿ ಸ್ಪಧಿರ್ಸಿದ್ದಾರೆ. ಯಾರೇ ನಿಂತರೂ ನಮ್ಮ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಿದೆ.
ಸಭೆಯಲ್ಲಿ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಈಗಾಗಲೇ ಕಾಂಗ್ರೆಸ್ ಪಕ್ಷ ಮತ್ತು ಬಂಡಾಯ ಅಭ್ಯರ್ಥಿಗಳು ವ್ಯವಸ್ಥಿತವಾಗಿ ಪ್ರಚಾರ ಮಾಡುವಲ್ಲಿ ಮುಂದಾಗಿದ್ದು, ಪ್ರತಿಯೊಬ್ಬ ಮತದಾರರನ್ನು ಸಂಪಕಿರ್ಸಿ ಕರಪತ್ರ ತಲುಪಿಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷ ಹಿಂದೆ ಬಿದ್ದಿದ್ದು ಗಮನಹರಿಸಬೇಕು ಎಂದು ಸಲಹೆ ನೀಡಿದರು.