ಕನ್ನಡಪ್ರಭ ವಾರ್ತೆ ಹಾಸನ
ಈ ಹಿಂದಿನ ೩೦ ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಮಹಿಳಾ ಸದಸ್ಯೆಯೊಬ್ಬರ ಮೂಲಕ ಹೇಳಿಸಿದ್ದಾರೆ. ಆದರೆ ನಾನು ಆ ತಾಯಿಗೆ ಹೇಳ ಬಯಸುತ್ತೇನೆ, ಪರಿಶಿಷ್ಟ ವರ್ಗದ ನನಗೆ ಅಧಿಕಾರ ನಡೆಸಲು ಇನ್ನಿಲ್ಲದ ಕಿರುಕುಳ ನೀಡಿದರು. ಸಮುದಾಯದ ಸಂಸ್ಥೆಯೊಂದರ ಜಾಗದ ಸಂಬಂಧ ನಾನು ಹೈಕೋರ್ಟ್‌ಗೆ ಅಲೆಯುವಂತೆ ಮಾಡಿದ್ದೀರಿ. ನನ್ನ ಅವಧಿಯಲ್ಲಿ ಪೌರಕಾರ್ಮಿಕರ ನಿವೇಶನಕ್ಕಾಗಿ ಎರಡೂವರೆ ಎಕರೆ ಜಾಗ ಕೊಡಿಸಿದ್ದೇನೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಗರೋತ್ಥಾನ ಯೋಜನೆಯಡಿ ೩೦ ಕೋಟಿ ರು. ತಂದಿದ್ದು, ಕೆಲಸ ನಡೆಯುತ್ತಿದೆ. ನಗರಕ್ಕೆ ಕುಡಿಯುವ ನೀರು ಶುದ್ಧೀಕರಿಸುವ ಫಿಲ್ಟರ್ ರೆಡಿ ಮಾಡಿಸಿದ್ದು ನಾನು, ಪಂಪ್‌ಹೌಸ್ ನಿರ್ವಹಣೆಯಲ್ಲಿ ಆಗುತ್ತಿದ್ದ ದುಂದುವೆಚ್ಚ ತಡೆಗಟ್ಟಿದ್ದೇನೆ ಎಂದು ತಮ್ಮ ಸಾಧನೆ ಹೇಳಿಕೊಂಡರು. ನಾನು ಮಾಡಿರುವ ಅಭಿವೃದ್ಧಿಯನ್ನು ಪರಿಶೀಲಿಸಲು ಸಮೀವುಲ್ಲಾ ಬುರ್ಖಾ ಹಾಕಿಕೊಂಡು ನಗರದಲ್ಲಿ ಸುತ್ತಾಡಲಿ. ಆಗ ಜನರಿಂದ ಯಾವ ಅಭಿಪ್ರಾಯ ವ್ಯಕ್ತವಾಗಲಿದೆ ಎಂಬುದು ಅವರಿಗೆ ತಿಳಿಯಲಿದೆ ಎಂದು ಹೇಳಿದರು.
ಅಧ್ಯಕ್ಷರ ಮೂಲಕ ಇ-ಸ್ವತ್ತು: ನಗರಸಭೆಯ ಅಧಿಕಾರ ಹಿಡಿದಿರುವ ಸಮೀವುಲ್ಲಾ ಇಲ್ಲ ಸಲ್ಲದ ಸೂಚನೆಯನ್ನು ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಜನರು ಇ-ಸ್ವತ್ತು ದಾಖಲೆಯನ್ನು ಅಧ್ಯಕ್ಷರ ಮೂಲಕವೇ ಪಡೆಯಬೇಕು ಎಂಬುದಾಗಿ ಹೇಳುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ನಡೆಸಲಾಗುವುದು. ನಗರಸಭೆ ಆಯುಕ್ತರಿಗೆ ಮಾತ್ರ ಇ- ಸ್ವತ್ತು ನೀಡಲು ಅಧಿಕಾರವಿದ್ದು, ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಜನರ ಶೋಷಣೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.ಶಾಸಕರು ಕಳೆದ ೧೪ ತಿಂಗಳ ಅವಧಿಯಲ್ಲಿ ನಗರಸಭೆಗೆ ಏನು ಅನುದಾನ ತಂದಿದ್ದಾರೆ ಎಂಬುದರ ಬಗ್ಗೆ ತಾಕತ್ತಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಗಿರೀಶ್ ಸವಾಲು ಹಾಕಿದರು.