ಸಮಾಜ ಒಡೆಯುವುದನ್ನು ತಡೆಯುವ ಕೆಲಸ ಶಾಮನೂರು ಮಾಡಲಿ: ಉಜ್ಜಯಿನಿ ಶ್ರೀ

KannadaprabhaNewsNetwork |  
Published : Dec 25, 2023, 01:32 AM IST
ಉಜ್ಜಯಿನಿ ಸಿದ್ದಲಿಂಗ ಸ್ವಾಮೀಜಿ  | Kannada Prabha

ಸಾರಾಂಶ

ಸಮುದಾಯದ ಕೆಲವರು ಮರದಂತಿರುವ ನಮ್ಮ ಸಮುದಾಯವನ್ನು ಕಡಿಯಲು ಕೊಡಲಿಗೆ ಬೇಕಾದ ಕಾವುಗಳಾಗಿ ಕೆಲಸ ಮಾಡುತ್ತಿದ್ದು, ಇಂತಹವರ ಕೊಡಲಿಗೆ ಕಾವುಗಳು ಸಿಗದಂತೆ ಕಾಪಾಡುವ ಕೆಲಸವನ್ನು ಶಾಮನೂರು ಶಿವಶಂಕರಪ್ಪನವರು ಮಾಡಬೇಕು ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಭಾನುವಾರ ಅಭಾವೀಲಿಂಮ ಹಮ್ಮಿಕೊಂಡಿದ್ದ 24ನೇ ಅಖಿಲ ಭಾರತ ವೀರಶೈವ ಲಿಂಗಾಯತ ಅಧಿವೇಶನದ ಸಮಾರೋಪದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಮುದಾಯದ ಕೆಲವರು ಮರದಂತಿರುವ ನಮ್ಮ ಸಮುದಾಯವನ್ನು ಕಡಿಯಲು ಕೊಡಲಿಗೆ ಬೇಕಾದ ಕಾವುಗಳಾಗಿ ಕೆಲಸ ಮಾಡುತ್ತಿದ್ದು, ಇಂತಹವರ ಕೊಡಲಿಗೆ ಕಾವುಗಳು ಸಿಗದಂತೆ ಕಾಪಾಡುವ ಕೆಲಸವನ್ನು ಶಾಮನೂರು ಶಿವಶಂಕರಪ್ಪನವರು ಮಾಡಬೇಕು ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಭಾನುವಾರ ಅಭಾವೀಲಿಂಮ ಹಮ್ಮಿಕೊಂಡಿದ್ದ 24ನೇ ಅಖಿಲ ಭಾರತ ವೀರಶೈವ ಲಿಂಗಾಯತ ಅಧಿವೇಶನದ ಸಮಾರೋಪದಲ್ಲಿ ಮಾತನಾಡಿದ ಅವರು, ಅಕ್ಕಿ ತನ್ನ ಮೂಲ ಸ್ವರೂಪ ಕಳೆದುಕೊಂಡು ಅನ್ನವಾಗುವಂತೆ ವೀರಶೈವ ಲಿಂಗಾಯತ ಧರ್ಮ ಸೇರಿದ ವ್ಯಕ್ತಿ ಲಿಂಗಧಾರಣೆಯಾಗಿ ತನ್ನ ಮೂಲ ಸ್ವರೂಪ ಕಳೆದುಕೊಂಡು, ಸಾಮರಸ್ಯದಿಂದ ಬಾಳುತ್ತಾನೆ. ಜಾತಿ ಗಣತಿ ಕಾಲಂನಲ್ಲಿ ಇನ್ನು ವೀರಶೈವ ಲಿಂಗಾಯತ ಎಂಬುದಾಗಿ ಸಮಾಜ ಬಾಂಧವರು ಬರೆಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತರ ಕನಸು ಸಮಾಜ ಒಂದಾಗಬೇಕೆಂಬುದಾಗಿದೆ. ಇಡೀ ಸಮಾಜ ಒಂದಾದರೆ ವ್ಯಕ್ತಿಗತ, ಸಾಮಾಜಿಕ ಬೆಳವಣಿಗೆ ಸಾಧ್ಯ. ಆದರೆ, ನಾವುಗಳು ನಮ್ಮಲ್ಲೇ ಚೌಕಟ್ಟು ಹಾಕಿಕೊಂಡಿ ದ್ದೇವೆ. ಇಷ್ಟೆಲ್ಲಾ ಗುರುಗಳನ್ನು ಇಟ್ಟುಕೊಂಡು, ಯಾವ ಗುರುಗಳೂ ಇಲ್ಲದಂತೆ ವರ್ತನೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ವ್ಯಕ್ತಿಯ ಸುಧಾರಣೆಯಾದರೆ ಸಮಾಜ ಸುಧಾರಣೆಯಾಗುತ್ತದೆ. ವ್ಯಕ್ತಿ ದಾರಿ ತಪ್ಪಿದರೆ ಸಮಾಜ ದಾರಿ ತಪ್ಪುತ್ತದೆ. ಲಿಂಗಾಯತ ಧರ್ಮ ಜಾತಿಯಲ್ಲ. ಅದೊಂದು ಧರ್ಮ, ತತ್ವ, ಸಿದ್ಧಾಂತ. ಅದಕ್ಕೆ ಬದ್ಧರಾಗಿ ಬದುಕುವ ಎಲ್ಲರೂ ಸಮಾಜದ ಬಂಧುಗಳು. ಮತ್ತೆ ನಮ್ಮದೇ ಚೌಕಟ್ಟು ಹಾಕಿಕೊಳ್ಳಬಾರದು. ನೆಲ, ನೀರು, ಗಾಳಿ, ಬೆಳಕು, ಆಕಾಶ ಸೇರಿದಂತೆ ಯಾವುದಕ್ಕೂ ಜಾತಿ ಇಲ್ಲ. ಆದರೆ, ನಾವು ಯಾಕೆ ಹೀಗೆ ಮಾಡುತ್ತಿದ್ದೇವೆಂಬ ಚಿಂತನೆ ಮಾಡಬೇಕು. ಇಷ್ಟಲಿಂಗಧಾರಣೆ ಮಾಡಬೇಕು. ಯುವ ಪೀಳಿಗೆಯಲ್ಲಿ ಆಚಾರ, ವಿಚಾರ ಬದಲಾಗಬೇಕು. ಕೇವಲ ರಾಜಕೀಯ ಸಂಘಟನೆ ಸಂಘಟನೆಯಲ್ಲ. ಸಾಮಾಜಿಕ ಸಂಘಟನೆಯಾಗಬೇಕು ಎಂದು ತಿಳಿಸಿದರು.

ವಿಶ್ವಜ್ಯೋತಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಘೋಷಣೆ ಮಾಡಲಿ. ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರ ನ್ನು ಸೇರಿಸಿ, ಸಾಮೂಹಿಕವಾಗಿ ಮೀಸಲಾತಿ ನೀಡಬೇಕು. ರೈತರಿಗೆ ನೀರಾವರಿ ಯೋಜನೆ ಜಾರಿಯಾದರೆ ರೈತರೇ ಸರ್ಕಾರಕ್ಕೆ ಸಾಲ ನೀಡುವಷ್ಟರ ಮಟ್ಟಿಗೆ ಆರ್ಥಿಕವಾಗಿ ಸಬಲರಾಗುತ್ತಾರೆ. ರೈತರು ಬದುಕಿದರೆ ಸರ್ಕಾರ, ಸಮಾಜವೂ ಬದುಕುತ್ತದೆ. ಸಮಾಜದ ಪ್ರತಿಯೊಬ್ಬರೂ ಬಸವಣ್ಣ, ಬುದ್ಧ, ಅಲ್ಲಮ, ಅಕ್ಕ ಮಹಾದೇವಿ, ಶಾಮನೂರು ಶಿವಶಂರಪ್ಪ, ಯಡಿಯೂರಪ್ಪನವರಂತೆ ಆಗಬೇಕು ಎಂದು ಅವರು ಕರೆ ನೀಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ