ಸಿದ್ದು 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ

KannadaprabhaNewsNetwork |  
Published : Dec 20, 2023, 01:15 AM IST
ಬೋಮ್ಮಾಯಿ | Kannada Prabha

ಸಾರಾಂಶ

ರಾಜ್ಯ ಸರ್ಕಾರ ವರ್ಗಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದೆ. ಅದು ವರ್ಗಾವಣೆಗೆ ಟಾರ್ಗೆಟ್‌ ಫಿಕ್ಸ್‌ ಮಾಡಿಕೊಂಡಿದ್ದರೆ, ಅಧಿಕಾರಿಗಳು ಯೋಜನೆಗಳಲ್ಲಿ ಕಮಿಷನ್‌ ಟಾರ್ಗೆಟ್‌ ಫಿಕ್ಸ್‌ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆರು ತಿಂಗಳ ಆಡಳಿತಾವಧಿಯ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದುಡ್ಡು ಪಡೆದು ಅಧಿಕಾರಿಗಳ ವರ್ಗಾವಣೆ: ಮಾಜಿ ಸಿಎಂ ಬೊಮ್ಮಾಯಿ ಆರೋಪಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯ ಸರ್ಕಾರ ವರ್ಗಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದೆ. ಅದು ವರ್ಗಾವಣೆಗೆ ಟಾರ್ಗೆಟ್‌ ಫಿಕ್ಸ್‌ ಮಾಡಿಕೊಂಡಿದ್ದರೆ, ಅಧಿಕಾರಿಗಳು ಯೋಜನೆಗಳಲ್ಲಿ ಕಮಿಷನ್‌ ಟಾರ್ಗೆಟ್‌ ಫಿಕ್ಸ್‌ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆರು ತಿಂಗಳ ಆಡಳಿತಾವಧಿಯ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಬಂದು ಆರು ತಿಂಗಳಾಗಿದೆ. ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಬರೀ ಸುಳ್ಳು ಹೇಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ಪೂರ್ವ ನೀಡಿರುವ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಮಧ್ಯಂತರ ಆರ್ಥಿಕ ಸ್ಥಿತಿಗತಿ ಕುರಿತು ಮಂಡಿಸಿದ ವರದಿಯಲ್ಲಿ ರಾಜ್ಯ ಆರ್ಥಿಕ ದುಸ್ಥಿತಿ ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಶೆಂಕೆ ವ್ಯಕ್ತಪಡಿಸಿದರು.

ಎಷ್ಟೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಲಿ. ಅದಕ್ಕೆ ತಕ್ಕಂತೆ ಆದಾಯ ಹೆಚ್ಚಳಕ್ಕೂ ಒತ್ತು ಕೊಡಬೇಕು. ಅಂದಾಗ ಮಾತ್ರ ಜನರ ಮೇಲೆ ಹೊರೆ ಬೀಳುವುದಿಲ್ಲ. ಅಭಿವೃದ್ಧಿ ಕೆಲಸಕ್ಕೂ ಸಮಸ್ಯೆಯಾಗುವುದಿಲ್ಲ. ಆದರೆ ಇಲ್ಲಿ ಆರ್ಥಿಕ ದುಸ್ಥಿತಿ ಎದುರಿಸುವಂತಾಗಿದೆ ಎಂದರು.

ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಿಲ್ಲ ಎಂದ ಅವರು, ಕೃಷ್ಣಾ ಮೇಲ್ದಂಡೆ ಹಂತ 3 ರ ಕಾಮಗಾರಿಗೆ ₹5000 ಕೋಟಿ ಬಿಡುಗಡೆ ಮಾಡಬೇಕು. ನಾವು ₹52 ಸಾವಿರ ಕೋಟಿ ಯೋಜನೆಗೆ ಅನುಮೋದನೆ ಕೊಟ್ಟಿದ್ದೇವೆ. ಭೂ ಪರಿಹಾರ ಮತ್ತು ಆರ್ ಆ್ಯಂಡ್ ಆರ್‌ಗೆ ಹಣ ಬಿಡುಗಡೆ ಮಾಡಬೇಕು. ಸುಮ್ಮನೆ ಕೋರ್ಟ್ ನೆಪ ಹೇಳುತ್ತಾ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೊಸ ಸರ್ಕಾರ ಬಂದಿದೆ ಎಂದು ಅನಿಸುತ್ತಲೇ ಇಲ್ಲ ಎಂದರು.

ಸವಾಲು:

ಕೇಂದ್ರದ ಅನುದಾನ ಬಂದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಬರೀ ರಾಜಕೀಯ ಆರೋಪವಷ್ಟೇ. ಕೇಂದ್ರದಿಂದ ಎಷ್ಟೆಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ನಾವು ದಾಖಲೆ ಬಿಡುಗಡೆ ಮಾಡುತ್ತೇವೆ. ಬಂದಿಲ್ಲ ಎಂದು ಅವರು ಬಿಡುಗಡೆ ಮಾಡಲಿ ಎಂದು ಬೊಮ್ಮಾಯಿ ಸವಾಲೆಸೆದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಪಡೆಯಲು ನಾವೂ ಪ್ರಯತ್ನ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮುಕ್ತವಾಗಿದ್ದಾರೆ ಎಂದರು.

ಬಾಕ್ಸ್‌

ಯಾರಿಗೂ ಭಯ ಇಲ್ಲ:

ರಾಜ್ಯದಲ್ಲಿ ಯಾರಿಗೂ ಭಯವೇ ಇಲ್ಲದಂತಾಗಿದೆ. ಅಧಿವೇಶನ ನಡೆಯುವಾಗಲೇ ವಂಟಮೂರಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಯುತ್ತದೆ. ರಾಜ್ಯದಲ್ಲಿ ಭ್ರೂಣ ಹತ್ಯೆ ನಿತ್ಯ ನಿರಂತರವಾಗಿವೆ. ಸಿಐಡಿಗೆ ಪ್ರಕರಣ ನೀಡಿ ಕೈತೊಳೆದುಕೊಂಡಿದ್ದಾರೆ. ಕೋಲಾರದಲ್ಲಿ ಮಕ್ಕಳಿಂದ ಮಲದಗುಂಡಿ ಸ್ವಚ್ಛಗೊಳಿಸಿರುವುದು ಅಮಾನವೀಯ. ಎಲ್ಲ ಮುಗಿದ ಮೇಲೆ ಅಮಾನತು ಮಾಡಲಾಗಿದೆ. ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಅವರೇ ಅಮಾನತು ಮಾಡುವುದರಲ್ಲಿ ನಿಮ್ಮ ಪೌರುಷ ಇದೆ. ಮತ್ತೆ ಇಂಥ ಘಟನೆ ಆಗದಂತೆ ನೋಡಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ