ಗದಗ: ಸನ್ಮಾರ್ಗ ಕಾಲೇಜಿನ ವಿದ್ಯಾರ್ಥಿಗಳು ಕೇವಲ ಶಿಕ್ಷಣವನ್ನಷ್ಟೇ ಅಲ್ಲದೆ ಜೀವನದ ಸೋಪಾನಗಳಾದ ಸನ್ಮಾರ್ಗ, ಸನ್ಮತಿ ಹಾಗೂ ಸಂಸ್ಕೃತಿಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಜೀವಮಾನ ಸಾಧನಾ ಪ್ರಶಸ್ತಿ ಪುರಸ್ಕೃತ ಚಂದ್ರು ಬಾಳಿಹಳ್ಳಿಮಠ ಹೇಳಿದರು.
ಪ್ರೊ. ರೋಹಿತ ಒಡೆಯರ ಮಾತನಾಡಿ, ಕೇವಲ ಅತ್ಯಲ್ಪ ಅವಧಿಯಲ್ಲಿ ಈ ಮಹಾವಿದ್ಯಾಲಯ ಶೈಕ್ಷಣಿಕವಾಗಿ ಇಷ್ಟೊಂದು ಪ್ರವರ್ಧಮಾನಕ್ಕೆ ಬಂದಿರುವುದು ಕೇವಲ ಸಂಸ್ಥೆ, ಶಿಕ್ಷಕ ವೃಂದದ ಪ್ರಯತ್ನ ಮಾತ್ರ ಅಲ್ಲದೇ ವಿದ್ಯಾರ್ಥಿಗಳ ಕಠಿಣ ಪರಿಶ್ರಮವೂ ಒಂದು ಪ್ರಮುಖ ಕಾರಣ ಎಂದರು.ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿದರು. ಈ ವೇಳೆ ಕಳೆದ ವರ್ಷ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡಾ ವಿಜೇತರಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಸಮಾರಂಭ ಉಪನ್ಯಾಸಕರಾದ ಪ್ರೊ. ಪರಶುರಾಮ ಕೊಟ್ನಿಕಲ್, ಪ್ರೊ. ಐ.ಆರ್. ಅಳವಂಡಿ ಹಾಗೂ ಪ್ರೊ. ಸಂಗೀತಾ ಬೀಳಗಿ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು.
ಸಂಸ್ಥೆಯ ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ, ನಿರ್ದೇಶಕರಾದ ಪ್ರೊ. ರಾಹುಲ ಒಡೆಯರ್, ಪ್ರೊ. ರೋಹಿತ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ಸೈಯ್ಯದ್ ಮತೀನ್ ಮುಲ್ಲಾ ಇದ್ದರು. ಉಪನ್ಯಾಸಕ ಪ್ರೊ. ಮುರಲೀಧರ ಸಂಕನೂರ ಸ್ವಾಗತಿಸಿದರು. ಆಡಳಿತಾಧಿಕಾರಿ ಎಂ.ಸಿ. ಹಿರೇಮಠ ವಂದಿಸಿದರು.