ಪರಿಸರ ಸಮೃದ್ಧಿಗೆ ವಿದ್ಯಾರ್ಥಿ ದೆಸೆಯಿಂದಲೇ ಅರಿವು ಮೂಡಲಿ: ಡಾ.ಎಂ.ವೀರೇಂದ್ರ ಸಲಹೆ

KannadaprabhaNewsNetwork |  
Published : Jun 06, 2024, 12:31 AM IST
‍ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಿಕಾರಿಪುರದ ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಪ್ರಾಚಾರ್ಯ ಡಾ.ಎಂ ವೀರೇಂದ್ರ ಸಸಿ ನೆಟ್ಟರು. | Kannada Prabha

ಸಾರಾಂಶ

ಪರಿಸರ ದಿನಾಚರಣೆ ಅಂಗವಾಗಿ ಶಿಕಾರಿಪುರದ ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಪ್ರಾಚಾರ್ಯ ಡಾ.ಎಂ ವೀರೇಂದ್ರ ಸಸಿ ನೆಟ್ಟರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ವಿದ್ಯಾರ್ಥಿ ಜೀವನದಿಂದಲೇ ಪರಿಸರದ ಬಗ್ಗೆ ಅರಿವು ಮೂಡಿದಾಗ ಪರಿಸರ ಸಮೃದ್ಧಿಯಾಗಲು ಸಾಧ್ಯ ಎಂದು ಇಲ್ಲಿನ ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಎಂ.ವೀರೇಂದ್ರ ಅಭಿಪ್ರಾಯಪಟ್ಟರು.

ಬುಧವಾರ ಪಟ್ಟಣದ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಥಮ ದಿನದ ಹಿನ್ನೆಲೆ ಸ್ವಾಗತ ಕೋರಿ ಸರಸ್ವತಿ ದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆವರಣದಲ್ಲಿ ನೇರಳೆ ಮತ್ತು ಹಲಸಿನ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ದಿನಗಳಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸುವ ರೀತಿ ಪ್ರಕೃತಿ ಬಗ್ಗೆ ಜಾಗೃತಿ ಉಂಟುಮಾಡಿದಾಗ ಪರಿಸರವನ್ನು ಸಮೃದ್ಧಗೊಳಿಸಲು ಸಾಧ್ಯ ಎಂದ ಅವರು, ವೃಕ್ಷೋ ರಕ್ಷತಿ ರಕ್ಷಿತ: ಎನ್ನುವಂತೆ ನಾವು ಪರಿಸರ ಸಂರಕ್ಷಿಸಿದರೆ ಪರಿಸರ ಮನುಕುಲ ಸಂರಕ್ಷಣೆ ಮಾಡುತ್ತದೆ. ಪರಿಸರ ಆರೋಗ್ಯವಾಗಿದ್ದಲ್ಲಿ ಮಾತ್ರ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ. ಇಂದು ವಿಪರೀತವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ ಮನುಷ್ಯನ ನಿತ್ಯದ ಬದುಕಿನಲ್ಲಿ ಭೂಮಿ ಸೇರುತ್ತಿದ್ದು ಇದರಿಂದಾಗಿ ಭೂಮಿ ಆರೋಗ್ಯಕ್ಕೆ ಮಾರಕವಾಗಿದೆ. ಪ್ಲಾಸ್ಟಿಕ್ ಪ್ರಮಾಣ ಹೆಚ್ಚಾದಂತೆ ವಾತಾವರಣದಲ್ಲಿ ಅಕಾಲಿಕ ಮಳೆಯಿಂದ ಬೆಳೆಗಳು ನಾಶವಾಗುತ್ತವೆ. ಉರಿ ಬಿಸಿಲು ಮನುಷ್ಯನ ನೆತ್ತಿ ಸುಡುತ್ತದೆ. ಕಾಡುಪ್ರಾಣಿ ನಾಡನ್ನು ಪ್ರವೇಶಿಸುತ್ತಿದ್ದು ಇದರೊಂದಿಗೆ ಹೊಸ ಹೊಸ ಬಗೆ ರೋಗಗಳು ಜೀವ ಹಿಂಡುತ್ತಿವೆ. ಋತುಗಳು ಕಾಲ ತಪ್ಪುತ್ತಿದ್ದು ಭೂಗೋಳ ಬಿಸಿಯಾಗುತ್ತದೆ. ಇದಕ್ಕೆಲ್ಲ ಕಾರಣ ಮನುಷ್ಯನ ದುರಾಸೆ ಜೀವನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮೀಕ್ಷೆಯ ಪ್ರಕಾರ ವರ್ಷಕ್ಕೆ ಭೂಮಿಯಲ್ಲಿನ ಪ್ರತಿಯೊಬ್ಬ ವ್ಯಕ್ತಿ 50 ಸಾವಿರ ಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಪರಿಸರದ ಮಹತ್ವ ಕುರಿತು ಕನ್ನಡ ಉಪನ್ಯಾಸಕ ಶಿವರಾಜ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಶಿವರಾಜ ಸ್ವಾಗತಿಸಿ, ನಿರೂಪಿಸಿ, ವಿಜ್ಞಾನ ವಿಭಾಗದ ಮುಖ್ಯಸ್ಥ ಪರ್ವಿಜ್ ಅಹಮದ್ ವಂದಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ