ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲಿ: ಶಾಸಕ ರಾಮಣ್ಣ ಲಮಾಣಿ

KannadaprabhaNewsNetwork | Published : Oct 17, 2024 12:11 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತಿರುವ ಕಾರಣ ಪ್ರತಿ ಶಾಲಾ-ಕಾಲೇಜುಗಳಲ್ಲಿ ಆಪ್ತ ಸಮಾಲೋಚನೆ ಕೇಂದ್ರಗಳನ್ನು ತೆರೆದು ಸೇವೆ ನೀಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಗದಗ: ವಿದ್ಯಾರ್ಥಿಗಳಿಗೆ ಪೋಷಕರಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಒತ್ತಡ ಹೆಚ್ಚಿರುತ್ತದೆ. ಆ ಒತ್ತಡವನ್ನು ಧನಾತ್ಮಕವಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಿ ಒಳ್ಳೆಯ ವ್ಯಕ್ತಿತ್ವ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ನಗರದ ಆರ್.ಡಿ.ಪಿ.ಆರ್. ವಿದ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಸುಮಾರು 10 ವರ್ಷದ ಮುಂಚೆ ಮನೋವೈದ್ಯರ ಬಗ್ಗೆ ಜನರಲ್ಲಿ ಬೇರೆ ಭಾವನೆ ಇತ್ತು. ಇವತ್ತಿನ ದಿನದಲ್ಲಿ ಮನೋವೈದ್ಯರ ಪ್ರಾಮುಖ್ಯತೆ ಹೆಚ್ಚಾಗಿದೆ. ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರು ಹಲವಾರು ಒತ್ತಡಗಳಿಂದ ಬಳಲುತ್ತಿದ್ದಾರೆ. ಒತ್ತಡವಿಲ್ಲದವರು ಪುಣ್ಯವಂತರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತಿರುವ ಕಾರಣ ಪ್ರತಿ ಶಾಲಾ-ಕಾಲೇಜುಗಳಲ್ಲಿ ಆಪ್ತ ಸಮಾಲೋಚನೆ ಕೇಂದ್ರಗಳನ್ನು ತೆರೆದು ಸೇವೆ ನೀಡಬೇಕು. ವಿದ್ಯಾರ್ಥಿಗಳು ಆಪ್ತಸಮಾಲೋಚನೆ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಬೆಳವಣಿಗೆಗೆ ಮಾನಸಿಕ ಆರೋಗ್ಯ ಬಹಳ ಮುಖ್ಯ. ವಿದ್ಯಾರ್ಥಿಗಳು ಭಾವನೆಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಉತ್ತಮ ವ್ಯಕ್ತಿತ್ವ ಹೊಂದಿ ಅತ್ಯುತ್ತಮವಾದ ಜೀವನ ನಡೆಸಬಹುದು. ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಕುರಿತು ಸಮಾಜದಲ್ಲಿ ಅರಿವು ಮೂಡಿಸಿ ಎಂದು ತಿಳಿಸಿದರು.

ಈ ವೇಳೆ ಮನೋವೈದ್ಯ ಡಾ. ಫಕೀರಪ್ಪ ಗಾಣಿಗೇರ ಉಪನ್ಯಾಸ ನೀಡಿ, ಮಾನಸಿಕ ಕಾಯಿಲೆಗಳು ಬರಲು ಕಾರಣ ಗುರುತಿಸುವುದು ಹೇಗೆ ಹಾಗೂ ಮಾನಸಿಕವಾಗಿ ಸಧೃಡರಾಗಲು ಬೇಕಾಗುವ ಕೌಶಲ್ಯಗಳ ಕುರಿತು ವಿವರಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಸುರೇಶ ಪೋಮಪ್ಪ ಪವಾರ, ಡಾ. ರಾಜೇಂದ್ರ ಸಿ. ಬಸರಿಗಿಡದ, ಡಾ. ಪ್ರೀತ್ ಖೋನಾ, ಡಾ. ವರ್ಷಾ ಅಂಗಡಿ, ಎಂ.ಎಚ್. ಕಂಬಳಿ, ಗೀತಾ ಕಾಂಬಳೆ, ಪುಷ್ಪಾ ಪಾಟೀಲ, ಶ್ರೀಧರ ಎಂ.ಸಿ., ವಿನಾಯಕ ಕಾಳಿ, ವಿನಾಯಕ ವಾಗಮೋರೆ, ಶೋಭಾ ವಡ್ಡರ, ನೂತನ ಹೊಸಮನಿ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವಾಣ ಸ್ವಾಗತಿಸಿದರು. ಉಪನ್ಯಾಸಕಿ ನಾಗರತ್ನ ನಾಯ್ಕ ನಿರೂಪಿಸಿದರು.

Share this article