ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಲಿ: ರಂಜಿತ್ ಕುಮಾರ್

KannadaprabhaNewsNetwork | Published : Feb 10, 2024 1:47 AM

ಸಾರಾಂಶ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಪಡೆದು, ಶೈಕ್ಷಣಿಕವಾಗಿ ಮುನ್ನೆಲೆಗೆ ಬಂದಾಗ ಮಾತ್ರ ನಿರೀಕ್ಷಿತ ಪ್ರಗತಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಬಳ್ಳಾರಿ: ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಪರಸ್ಪರ ಸೌಹಾರ್ದತೆಯ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.

ನಗರದ ಬಸವ ಭವನದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಕಿತ್ತೂರುರಾಣಿ ಚೆನ್ನಮ್ಮ ಪ್ರಾಥಮಿಕ ಹಾಗೂ ಬಾಲಕಿಯರ ಪ್ರೌಢಶಾಲೆಯ "ಸಂಭ್ರಮ- 2024 " ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಪಡೆದು, ಶೈಕ್ಷಣಿಕವಾಗಿ ಮುನ್ನೆಲೆಗೆ ಬಂದಾಗ ಮಾತ್ರ ನಿರೀಕ್ಷಿತ ಪ್ರಗತಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದ ಪ್ರಗತಿಯೂ ಸಾಧಿಸಿದಂತಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧರಾಮ ಕಲ್ಮಠ ಅವರು, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ, ವ್ಯಕ್ತಿತ್ವ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೀವಿ ಸಂಘದ ಕಾರ್ಯದರ್ಶಿ ಗುರುಸಿದ್ದಸ್ವಾಮಿ, ವಿದ್ಯಾರ್ಥಿನಿಯರು ವಿದ್ಯೆಯ ಜತೆಗೆ ಸಂಸ್ಕಾರವನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಯಶಸ್ವಿಗೆ ಯಾವುದೇ ಅಡ್ಡದಾರಿ ಇರುವುದಿಲ್ಲ, ನಿರಂತರ ಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಮ್ಮರಚೇಡು ಮಠದ ಕಲ್ಯಾಣ ಸ್ವಾಮಿಗಳು, ಇಂದು ವಿದ್ಯಾರ್ಥಿಗಳಲ್ಲಿ ಮೌಲ್ಯಗಳು ಕುಸಿದಿದ್ದು, ಮೌಲ್ಯರಹಿತ ಶಿಕ್ಷಣಕ್ಕೆ ಯಾವುದೇ ಅರ್ಥವಿರುವುದಿಲ್ಲ ಎಂದರು.

ವೀವಿ ಸಂಘದ ಅಧ್ಯಕ್ಷ ರಾಮನಗೌಡ, ಮೇಯರ್ ಬಿ. ಶ್ವೇತಾ, ಆಡಳಿತ ಮಂಡಳಿಯ ಸದಸ್ಯರಾದ ಜೋಳದರಾಶಿ ಬಸವರಾಜಗೌಡ, ಚೆಳ್ಳಗುರ್ಕಿ ಮಂಜುನಾಥಗೌಡ, ಆರ್.ಜೆ. ಸುಜಾತಾ, ಕೆ.ವಿ. ವೀಣಾ, ಅರವಿ ಶರಣ ಬಸವನಗೌಡ, ಎಸ್.ಟಿ.ಎಂ. ಸದಾಶಿವಯ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಏಳುಬೆಂಚೆ ರಾಜಶೇಖರಗೌಡ, ಎಸ್. ಮಲ್ಲನಗೌಡ, ಕಾತ್ಯಾಯಿನಿ ಮರಿದೇವಯ್ಯ, ಕುಪ್ಪಗಲ್ಲು ಗಿರಿಜಾ ಹಾಗೂ ಸಿ.ಎಂ. ವೀರಭದ್ರಯ್ಯ, ಶ್ರೀಧರಗಡ್ಡೆ ವೀರಭದ್ರಯ್ಯ, ಐ.ಎಂ. ಮಹೇಶ್ ಮತ್ತು ಶಾಲಾ ಮುಖ್ಯಗುರು ಎಂ. ಗಿರಿಜಾ, ಪಿ. ಕಟ್ಟೆಮ್ಮ, ಕೆ. ತಿಪ್ಪೆರುದ್ರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಕೊನೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕಿ ಗೌರಿ ಹಾಗೂ ಶೈಲಜಾ ಕಾರ್ಯಕ್ರಮ ನಿರ್ವಹಿಸಿದರು.

Share this article