ಕುಮಟಾ: ಪಟ್ಟಣದ ಕೈಗಾರಿಕೆ ವಸಾಹತು ಪ್ರದೇಶದ ಯೋಗಲಕ್ಷ್ಮೀ ನರಸಿಂಹ ದೇವಸ್ಥಾನದ ಸಭಾಂಗಣದಲ್ಲಿ ಲಕ್ಷ್ಮೀ ನರಸಿಂಹ ಸೇವಾ ಟ್ರಸ್ಟ್‌ನ ವತಿಯಿಂದ ಇತ್ತೀಚೆಗೆ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ₹೫ ಸಾವಿರಗಳಂತೆ ಶೈಕ್ಷಣಿಕ ಧನಸಹಾಯ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಅಧ್ಯಕ್ಷ ಶ್ರೀಧರ ಮೋಹನ ನಾಯಕ ಮಾತನಾಡಿ, ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವಕ್ಕೆ ತಕ್ಕ ಧನ, ಗೌರವ ಸಿಗುತ್ತದೆ. ಈ ಧನ ಸಹಾಯ ಯೋಗಲಕ್ಷ್ಮೀ ನರಸಿಂಹ ದೇವರ ಮಹಾಪ್ರಸಾದ ಎಂದು ತಿಳಿದು ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು ಎಂದರು.
ರೋಟರಿ ಅಧ್ಯಕ್ಷ ಎನ್.ಆರ್. ಗಜು ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟಿನ ರಾಘವೇಂದ್ರ ಪೈ, ಶಿರಾಲಿ ರಾಧಾಕೃಷ್ಣ ನಾಯಕ, ಮಾರುತಿ ನಾಯಕ, ಅರ್ಚಕ ಸುಬ್ರಾಯ ಭಟ್ಟ ಉಪಸ್ಥಿತರಿದ್ದರು.ಶ್ರೇಯಾ ಶ್ರೀಧರ ನಾಯಕ ಪ್ರಾರ್ಥಿಸಿದರು. ಪ್ರೊ. ಆನಂದ ವೈ. ನಾಯಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಜಾನನ ಹೆಗಡೆ ನಿರೂಪಿಸಿದರು. ಉಪನ್ಯಾಸಕರಾದ ನಾಗರಾಜ ನಾಯ್ಕ, ನಾಗೇಶ ಹರಿಕಾಂತ, ಗಣೇಶ ಭಟ್ಟ, ರಾಘವೇಂದ್ರ ಮಡಿವಾಳ ಇತರರು ಇದ್ದರು.