ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಧಿಕಾರಿಗಳಾಗಲಿ: ಡಿಸಿ ದಿವಾಕರ

KannadaprabhaNewsNetwork |  
Published : Feb 19, 2024, 01:37 AM IST
18ಎಚ್‌ಪಿಟಿ3- ವಿಜಯನಗರ ಜಿಲ್ಲಾಡಳಿತದ ವತಿಯಿಂದ ಹೊಸಪೇಟೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ ಭಾನುವಾರ ನಡೆದ ಸರ್ಕಾರಿ ವಸತಿ ನಿಲಯಗಳ ಎಸ್ಸೆಸ್ಸೆಲ್ಲಿ, ಪಿಯುಸಿ ಮತ್ತು ಪದವೀಧರ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಮಾತನಾಡಿದರು. ಎಸ್ಪಿ ಶ್ರೀಹರಿಬಾಬು ಮತ್ತಿತರರಿದ್ದರು. | Kannada Prabha

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವಲ್ಲಿ ಹಿಂಜರಿಕೆ ಬೇಡ. ಯುವಕರು ಕೀಳರಿಮೆ ಮನೋಭಾವದಿಂದ ಹೊರಬರಬೇಕು.

ಹೊಸಪೇಟೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಿಜವಾಗಿಯೂ ಪ್ರತಿಭಾವಂತರಾಗಿದ್ದಾರೆ. ಹಾಗಾಗಿ ಜಿಲ್ಲಾಡಳಿತವೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶ್ರಮವಹಿಸಿ, ಅಧಿಕಾರಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಭಾನುವಾರ ಸರ್ಕಾರಿ ವಸತಿನಿಲಯಗಳ ಎಸ್ಸೆಸ್ಸೆಲ್ಲಿ, ಪಿಯುಸಿ ಮತ್ತು ಪದವೀಧರ ವಿದ್ಯಾರ್ಥಿಗಳಿಗೆ ಪರೀಕ್ಷಾ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವಲ್ಲಿ ಹಿಂಜರಿಕೆ ಬೇಡ. ಯುವಕರು ಕೀಳರಿಮೆ ಮನೋಭಾವದಿಂದ ಹೊರಬರಬೇಕು. ಉನ್ನತ ಗುರಿ ಇಟ್ಟು ಮುನ್ನಡೆದರೆ ಅಧಿಕಾರಿಗಳಾಗಿ ದೇಶ ಕಟ್ಟುವ ಸದವಕಾಶ ದೊರೆಯಲಿದೆ ಎಂದರು.

ವಿದ್ಯಾರ್ಥಿಗಳ ಜೀವನ ಬರೀ ಭ್ರಮೆಯಲ್ಲಿರುತ್ತದೆ. ಕಾಲೇಜು, ತರಬೇತಿ ಕೇಂದ್ರಗಳಲ್ಲಿ ಉತ್ತಮ ಮಾರ್ಗದರ್ಶನ ದೊರೆತಾಗ ನಮಗೆ ಸಾಧನೆಗೆ ದಾರಿ ಕಾಣುತ್ತದೆ. ತಂದೆ, ತಾಯಿ, ಗುರುಗಳ ಹಾಗೂ ಹಿರಿಯರ ಮಾರ್ಗದರ್ಶನವನ್ನು ಯಾರು ಶ್ರಮ, ಶ್ರದ್ಧೆಯಿಂದ ಪಾಲಿಸುತ್ತಾರೋ ಅವರು ಸಾಧನೆ ಮಾಡುತ್ತಾರೆ. ಆರು ವರ್ಷ ಕಠಿಣ ಶ್ರಮಪಟ್ಟರೆ 60 ವರ್ಷ ಸುಖ ಜೀವನ ನಡೆಸಬಹುದು. ಜಾಗತಿಕ ಯುಗದಲ್ಲಿ ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಇಲ್ಲ. ವಯಸ್ಸು ಇರುವುದರೊಳಗೆ ಸಾಧನೆ‌ ಮಾಡಬೇಕು. ಸಾಧನೆಗೆ ಮಾರ್ಗದರ್ಶನ ಬಹಳ ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಸಾಮಾನ್ಯ ಜ್ಞಾನ ಹೆಚ್ಚಿಸುತ್ತದೆ. ಸತತ ಪ್ರಯತ್ನ ಮಾಡುವವರು ಉತ್ತಮ ನಾಗರಿಕರಾಗಬಲ್ಲರು. ಆತ್ಮವಿಶ್ವಾಸ, ಛಲದಿಂದ ಕಠಿಣ ಶ್ರಮ ಮಾಡಿದರೆ ಖಂಡಿತ ಯಶಸ್ಸು ಸಿಗಲಿದೆ ಎಂದರು.

ಎಸ್ಪಿ ಶ್ರೀಹರಿಬಾಬು ಮಾತನಾಡಿ, ವಿದ್ಯಾರ್ಥಿಜೀವನದಲ್ಲಿ ಉತ್ತಮ ಸ್ನೇಹಿತರ ಸಹವಾಸ ಮಾಡಬೇಕು. ಆಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಾವು ಗ್ರಾಮೀಣ ಭಾಗದಿಂದ ಬಂದಿದ್ದೇವೆ ಎಂದು ಹಿಂಜರಿಯಬಾರದು. ಓದಿನ ಕಡೆಗೆ ಗಮನ ಹರಿಸಿದರೆ, ಖಂಡಿತ ಯಶಸ್ಸು ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಕಾಟಾಚಾರಕ್ಕೆ ತೆಗೆದುಕೊಳ್ಳಬಾರದು. ಗುರಿ, ಛಲದೊಂದಿಗೆ ಶ್ರದ್ಧೆಯಿಂದ ಓದಿದರೆ, ಸಾಧನೆ ಮಾಡಲು ಸಾಧ್ಯ ಎಂದರು.

ಶಿಕಾರಿಪುರದ ಸಾಧನ ಅಕಾಡೆಮಿಯ ಪ್ರಾಧ್ಯಾಪಕ ಬಿ. ಮಂಜುನಾಥ, ರಾಣಿಬೆನ್ನೂರಿನ ಜೀವನ ಕೌಶಲ್ಯ ತರಬೇತುದಾರ ನಂದೀಶ ಬಿ. ಶೆಟ್ಟಾರ್, ಎಸ್ಟಿ ಕಲ್ಯಾಣಾಧಿಕಾರಿ ಶಾಷು ಮೋದಿನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!