ರಾಜ್ಯಮಟ್ಟದ ಸಂಸ್ಕೃತೋತ್ಸವದ ಸಮಾರೋಪ ಕಾರ್ಯಕ್ರಮ
ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆದಾಗ ಓದುವ ರೂಢಿ ಹೆಚ್ಚುತ್ತದೆ. ಪ್ರತಿಯೊಬ್ಬರು ಒಂದು ಸ್ಪರ್ಧೆಯಲ್ಲಾದರೂ ಭಾಗವಹಿಸಬೇಕು ಎಂದು ಸ್ವರ್ಣವಲ್ಲೀಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ತಾಲೂಕಿನ ಸ್ಬರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಎರಡು ದಿನಗಳಿಂದ ನಡೆದ ರಾಜ್ಯಮಟ್ಟದ ಸಂಸ್ಕೃತೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.ಓದುವ ವಿಷಯದಲ್ಲಿ ವಿದ್ಯಾರ್ಥಿಗಳ ಉತ್ಸಾಹ ವರ್ಧಿಸಲು ಈ ರೀತಿಯಾದ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಪ್ರತಿಯೊಂದು ವಿದ್ಯಾರ್ಥಿಗಳು ಒಂದು ಸ್ಪರ್ಧೆಯಲ್ಲಿ ಆದರೂ ಭಾಗವಹಿಸುವ ಸಲುವಾಗಿ ಹೆಚ್ಚಿಗೆ ಸ್ಪರ್ಧೆ ಮಾಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ನಾನು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತೆಗೆದುಕೊಳ್ಳಬೇಕು ಎಂಬ ಮನಸ್ಸು ವಿದ್ಯಾರ್ಥಿಗಳಲ್ಲಿ ಈಗಲೇ ಬರಬೇಕು. ಈ ರೀತಿಯಾದ ಮನಸ್ಸು ಬಂದರೆ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಓದುವ ರೂಢಿ ಬಂದೇ ಬರುತ್ತದೆ. ಅವರಿಗೆ ಓದುವ ವಿಷಯದಲ್ಲಿ ಉತ್ತೇಜನ ನೀಡುವ ಸಲುವಾಗಿ ಸ್ಪರ್ಧೆಗಳನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ ಎಂದರು.
ಶ್ರೀ ಮಠದ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸ್ವರ್ಣಗಂಗಾ ಎಂಬ ಪತ್ರಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ವಿದ್ಯಾರ್ಥಿಗಳಿಗಾಗಿ ನಡೆದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಶ್ರೀಗಳು ಆಶೀರ್ವಾದ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಪ್ರಾಚಾರ್ಯ ವಿದ್ವಾನ್ ಕೃಷ್ಣ ಜೋಶಿ, ವಿದ್ಯಾಸಂಸ್ಥೆಯ ಪದಾಧಿಕಾರಿಗಳಾದ ಎಂ.ಜಿ. ಹೆಗಡೆ, ಶಿವರಾಮ ಭಟ್ ಇದ್ದರು. ವಿದ್ವಾನ್ ಶಂಕರ ಭಟ್ ಉಂಚಳ್ಳಿ ಕಾರ್ಯಕ್ರಮ ನಿರ್ವಹಿಸಿದರು.