ಕಾರಟಗಿ: ಉತ್ತಮ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಸಾಹಿತ್ಯದ ಓದು ಅಗತ್ಯ ಎಂದು ಶಿಕ್ಷಕ, ಕವಿ ರಮೇಶ ಬನ್ನಿಕೊಪ್ಪ ಹೇಳಿದರು.ತಾಲೂಕಿನ ಜಮಾಪುರದ ಮೊರಾರ್ಜಿ ದೇಸಾಯಿ ಉನ್ನತೀಕರಿಸಿದ ವಸತಿ ಶಾಲೆಯಲ್ಲಿ ಕಸಾಪ ಘಟಕದಿಂದ ಆಯೋಜಿಸಲಾಗಿದ್ದ ಕನ್ನಡ ಕಾರ್ತಿಕೋತ್ಸವ ಉಪನ್ಯಾಸ ಮಾಲಿಕೆಯ ‘ವಿದ್ಯಾರ್ಥಿಗಳಿಗೆ ಸಾಹಿತ್ಯದ ಅವಶ್ಯಕತೆ ವಿಷಯದ ಕುರಿತು ಮಾತನಾಡಿದರು.ಕನ್ನಡ ನಾಡು ನುಡಿ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಬಹುದೊಡ್ಡದು. ಯಾರು ಸಾಹಿತ್ಯವನ್ನು ಪ್ರೀತಿಸುತ್ತಾರೋ ಅವರು ಬದುಕನ್ನು ಪ್ರೀತಿಸುತ್ತಾರೆ. ಸಮಾಜದಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು, ಹೃದಯ ಹೃದಯಗಳನ್ನು ಬೆಸೆಯುವಂತೆ ಮಾಡುವ ಸಾಮರ್ಥ್ಯ ಸಾಹಿತ್ಯಕ್ಕಿದೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸಿ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಬೇಕಾದರೆ ಸಾಹಿತ್ಯದ ಓದು ಅಗತ್ಯ ಎಂದರು.ಇದಕ್ಕೆ ನಮ್ಮ ಜನಪದರ ಬದುಕೇ ಸಾಕ್ಷಿ. ಅವರು ಕುಟ್ಟುವಾಗ, ಬಿತ್ತುವಾಗ, ಕಳೆ ಕೀಳುವಾಗ, ಕೊಯ್ಲು ಮಾಡಿ ರಾಶಿ ಮಾಡುವ ಸಂದರ್ಭ ಹೀಗೆ ವಿವಿಧ ಕೆಲಸ ಮಾಡುವ ಸಮಯದಲ್ಲಿ ತಾನು ಮಾಡುವ ಕೆಲಸಗಳಲೆಲ್ಲ ತನ್ಮಯತೆ ತುಂಬಲು, ಮನುಷ್ಯನಿಗೆ ಸಹಜವಾಗಿ ಕಾಡುವ ಏಕಾತಾನತೆ ಹೊಡೆದೋಡಿಸಲು, ಸಂಭ್ರಮ, ಉಲ್ಲಾಸದಿಂದ ಕೆಲಸಗಳನ್ನು ಸಾಗಿಸಲು ಜನಪದ ಸಾಹಿತ್ಯ ನೆರವಾಗಿತ್ತು. ಈ ಆಧುನಿಕ, ಯಾಂತ್ರೀಕರಣದ ಕಾಲಘಟ್ಟದ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೂ ಸಾಹಿತ್ಯದ ಜೊತೆ ಅನುಸಂಧಾನ ಇಂದಿನ ತುರ್ತು ಅಗತ್ಯ ಎಂದರು.ಕನ್ನಡ ಉಪನ್ಯಾಸಕಿ ವಸಂತಾ ಮಾಲಿಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಬಸಪ್ಪ ವಕ್ಕಳದ ಮಾತನಾಡಿದರು.ಈ ವೇಳೆ ಚಂದ್ರಶೇಖರ ಬೆನ್ನೂರು, ವೀರಣ್ಣ ಅಂಗಡಿ ಉಳೇನೂರು, ಚನ್ನಪ್ಪ ಕಂಚಿ, ಹನುಮಪ್ಪ ಉಪ್ಪಲದೊಡ್ಡಿ, ಅಶೋಕ ಪಾಟೀಲ್, ಶಿವರಾಜ ಅಂಗಡಿ, ಶಿಕ್ಷಕರು, ಸಿಬ್ಬಂದಿ ಇದ್ದರು.ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕವಾಗಿ, ಮಂಜುನಾಥ್ ಚಿಕೇನಕೊಪ್ಪ, ಉಪನ್ಯಾಸಕ ಮಹೇಶ್ ಕಮ್ಮಾರ ಕಾರ್ಯಕ್ರಮ ನಿರ್ವಹಿಸಿದರು.