ಕನ್ನಡಪ್ರಭ ವಾರ್ತೆ ಶಹಾಪುರ
ಪ್ರತಿಯೊಬ್ಬರಲ್ಲಿಯೂ ವಿಶೇಷ ಪ್ರತಿಭೆಗಳಿರುತ್ತವೆ. ಪೋಷಕರು ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೊತ್ಸಾಹಿಸಿಬೇಕು ಎಂದು ಕನ್ನಡ ಚಲನಚಿತ್ರ ಪೋಷಕ ನಟ ಹಾಗೂ ಪ್ರಸಿದ್ಧ ಜನಪದ ಸಂಗೀತಗಾರ ಮತ್ತು ಸಾಹಿತಿ ಗುರುರಾಜ್ ಹೊಸಕೋಟೆ ಹೇಳಿದರು.ಸಮೀಪದ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿ ಜ.8, 9 ಮತ್ತು 10ರಂದು ನಡೆಯುವ 14ನೇಯ ಅಂತರ ವಿಶ್ವವಿದ್ಯಾಲಯಗಳ ಯುವಜನೊತ್ಸವದ ಅಂಗವಾಗಿ ಕಲಾ ಝೇಂಕಾರ ಎಂಬ ಶೀರ್ಷಿಕೆ ಅಡಿಯಲ್ಲಿ ಸಾಂಸ್ಕೃತಿಕ ಮೆರವಣಿಗೆ ಹಾಗೂ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ಆಧುನಿಕ ಶಿಕ್ಷಣ, ಮೊಬೈಲ್, ಟಿವಿ ಪ್ರಭಾವದಿಂದ ಇಂದು ಜನಪದ ಕಲೆಗಳು ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಇಂದು ತಮ್ಮ ಕಲಾ ಪ್ರದರ್ಶಿಸಿದ ಯುವಕರು ಗತ ವೈಭವವಾದ ಜಾನಪದ ಕಲಾ ನೈಪುಣ್ಯತೆ ಮರುಕಳಿಸುವಂತೆ ಮಾಡಿದ್ದಾರೆ. ಈ ನೆಲದಲ್ಲಿ ಸಾಕಷ್ಟು ವಿಶಿಷ್ಟ ಪ್ರತಿಭೆಗಳಿದ್ದು, ಆ ಪ್ರತಿಭೆಗಳನ್ನು ಅನಾವರಣಗೊಳಿಸಲು ಯುವಜನೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.ಜಾನಪದ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿ ಉಣಬಡಿಸುವ ಗುರುತರವಾದ ಜವಾಬ್ಧಾರಿ ಪ್ರಜ್ಞಾವಂತ ನಾಗರಿಕರದಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಡೀನ್ ಡಾ.ಎಸ್.ಬಿ.ಗೌಡಪ್ಪ, ಇಂತಹ ವೈವಿಧ್ಯಮಯ ಜನಪದ ಕಲೆಗಳು ನಮ್ಮ ಸಂಸ್ಕೃತಿ ಜೀವಾಳವಾಗಿವೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆ ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ ಎಂದರು.ಈ ಕಾರ್ಯಕ್ರಮದಲ್ಲಿ ಲಂಬಾಣಿ ನೃತ್ಯ, ಸಾಂಪ್ರದಾಯಿಕ ಆಚರಣೆಗಳು ಮನಸೂರಗೊಂಡವು. ಯುವಜನೋತ್ಸವದಲ್ಲಿ ಭೀಮರಾಯನ ಗುಡಿಯ ಕೃಷಿ ವಿಶ್ವವಿದ್ಯಾಲಯ ಡೀನ್ ಡಾ.ಪಿ.ಎಚ್.ಕುಚನೂರು, ಶರಣ ಸಾಹಿತಿ ಹಾಗೂ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ, ಡಾ. ಕೆ.ವಿ. ಹಿರೇಮಠ್, ಡಾ. ದಯಾನಂದ ಸಾತಿಹಾಳ, ಡಾ. ಶಾಮರಾವ್ ಕುಲಕರ್ಣಿ ಸೇರಿದಂತೆ ಇತ್ತರರಿದ್ದರು.