ಹೊಸಪೇಟೆ: ಜಾನಪದ ಕಲೆ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳ ಕುರಿತು ಅರಿವು ಮೂಡಿಸಲು ಎಲ್ಲ ಕಲಾತಂಡಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಸಾರ್ವಜನಿಕರ ಗಮನಕ್ಕೆ ಬರಲಿ ಎಂಬ ಉದ್ದೇಶದಿಂದ ಜಾಹೀರಾತು, ಆಡಿಯೋ ಜೀಂಗಲ್ಸ್, ಎಲ್‌ಇಡಿ ಮೂಲಕ ವಿಡಿಯೋ ಬಿತ್ತರಿಸುವುದು ಹೀಗೆ ವಿವಿಧ ಬಗೆಗಳಲ್ಲಿ ಮಾಹಿತಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಜಾನಪದ ಕಲಾತಂಡಗಳ ಮೂಲಕ ನೀಡುವ ಅರಿವು ಸುಲಭವಾಗಿ ಸಿಗಲಿದ್ದು, ಈ ಹಿನ್ನೆಲೆಯಲ್ಲಿ ಜಾನಪದಕ್ಕೆ ಒತ್ತು ನೀಡಲಾಗುತ್ತಿದೆ.
ಸಂಸ್ಕೃತಿ ಮತ್ತು ಸಂಸ್ಕಾರದ ವಿಚಾರಗಳನ್ನು ಜನರಿಂದ ಜನರಿಗೆ ಹೇಳಬೇಕಾದ ಜನಪದ ಕಲೆಗಿರುವ ಗಮ್ಮತ್ತು ಬೇರೆ ಕಲೆಗಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಜಾನಪದ ಕಲೆಗೆ ಅತ್ಯಂತ ಪ್ರಾಮುಖ್ಯತೆ ಇದೆ ಎಂದರು.ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ಪಾತ್ರ ವಹಿಸಲಿವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳು ಅತ್ಯಂತ ಮಹತ್ವದ್ದಾಗಿವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಮೂಲಕ ಅನುಷ್ಠಾನವಾಗುತ್ತಿರುವ ಸರ್ಕಾರದ ವಿವಿಧ ಯೋಜನೆಗಳು, ಸೇವೆಗಳು, ಕಾರ್ಯಕ್ರಮಗಳ ಸದುಪಯೋಗ, ರೋಗಗಳು ಮತ್ತು ಅವುಗಳ ಜಾಗೃತಿ, ಪರಿಹಾರದ ಬಗ್ಗೆ ಜಾನಪದ ಕಲೆ ಮೂಲಕ ತಿಳಿಸಿದಾಗ ಪ್ರತಿಯೊಬ್ಬ ನಾಗರಿಕರ ಮತ್ತು ವಿಶೇಷವಾಗಿ ಗ್ರಾಮೀಣ ಭಾಗದ ಸಾರ್ವಜನಿಕರ ಗಮನ ಸೆಳೆಯುವಂತಾಗುತ್ತದೆ. ಈ ಉದ್ದೇಶದಿಂದ ಜಾನಪದ ಕಲಾತಂಡಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಅನಕ್ಷರಸ್ಥರಿಗೆ ಜನಪದ ಕಲೆ ಮೂಲಕ ಆರೋಗ್ಯ ಜಾಗೃತಿ ಮೂಡಿಸಲು ಸರ್ಕಾರ, ಆರೋಗ್ಯ ಇಲಾಖೆಯು ಕಾರ್ಯಕ್ರಮವನ್ನು ರೂಪಿಸಿದೆ. ಅನಕ್ಷರಸ್ಥರಿಗೆ ಲಿಪಿಗಿಂತ ಭಾಷೆ ಹೆಚ್ಚು ಸಂವಹನವನ್ನು ನೀಡುತ್ತದೆ. ಜಾನಪದ ಕಲೆ ನೋಡುವ ಮತ್ತು ಭಾಷೆಯಲ್ಲಿ ಕೇಳುವ ಕಲಾ ಪ್ರಕಾರಗಳಾಗಿದ್ದು, ಇಂತಹ ಕಲಾ ಪ್ರಕಾರಗಳ ಮೂಲಕ ಅರಿವು ಮೂಡಿಸಲು ಸಾಮಾನ್ಯರಿಗೆ ಪ್ರಭಾವಿಸುತ್ತವೆ. ಕನ್ನಡ ವಿಶ್ವವಿದ್ಯಾಲಯವು ಆರಂಭಗೊಂಡು ಇಂದಿಗೆ 33 ವರ್ಷಗಳು ಕಳೆದಿವೆ. ಜನಪದ ಮತ್ತು ಬುಡಕಟ್ಟು ಕಲೆಗಳ ಬಗ್ಗೆ ಉತ್ತಮ ಸಂಶೋಧನೆಗಳನ್ನು ಮಾಡಿ, ಪುಸ್ತಕಗಳನ್ನು ಪ್ರಕಟಿಸಿ, ವಿಚಾರ ಸಂಕಿರಣಗಳು ಹಾಗೂ ಉಪನ್ಯಾಸಗಳನ್ನು ಏರ್ಪಡಿಸಿದೆ. ಜನಪದ ಸಾಹಿತ್ಯದ ಮಹತ್ವವನ್ನು ಜನಸಾಮಾನ್ಯರಿಗೆ ಹಾಗೂ ವಿದ್ಯಾವಂತರಿಗೆ ತಲುಪಿಸುವಲ್ಲಿ ದೊಡ್ಡ ಪ್ರಯತ್ನ ಕನ್ನಡ ವಿವಿ ಮಾಡಿದೆ ಎಂದರು.