ಬೆಳ್ತಂಗಡಿ : ಗಮಕ ಕಲೆಯಲ್ಲಿರುವ ಪುರಾಣದ ಸಂದೇಶವನ್ನು ಯುವ ಜನಾಂಗದಲ್ಲಿ ಮೂಡಿಸಲು ಯಕ್ಷಗಾನ, ಗಮಕ ಕಲೆಗೆ ಪ್ರೋತ್ಸಾಹ ಅಗತ್ಯ. ಕೇರಳದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಯಕ್ಷಗಾನ , ಗಮಕ ಕಲೆಯನ್ನು ಸೇರಿಸಿದಂತೆ ಕರ್ನಾಟಕ ಸರ್ಕಾರವೂ ಶಾಲಾ, ಕಾಲೇಜುಗಳ ಪ್ರತಿಭಾ ಕಾರಂಜಿಯಲ್ಲಿ ಗಮಕ ಕಲೆಯನ್ನು ಸೇರಿಸಿದರೆ ಕಲೆ ಮಕ್ಕಳಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಲಹೆ ನೀಡಿದ್ದಾರೆ.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಡಾ ಹರಿಕೃಷ್ಣ ಪುನರೂರು ‘ಗಮಕ ಜನಾರ್ದನ’ ‘ಸ್ಮರಣ ಸಂಚಿಕೆ ಸಾಂಕೇತಿಕವಾಗಿ ಅನಾವರಣಗೊಳಿಸಿದರು.
ಸಂಪಾದಕ ಡಾ. ಶ್ರೀಧರ ಭಟ್ ಸ್ಮರಣ ಸಂಚಿಕೆ ಕುರಿತು ಪ್ರಸ್ತಾವಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮುಳಿಯ ಶಂಕರ ಭಟ್ ಶುಭಾಶಂಸನೆಗೈದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಡುಬಿದಿರೆ ತಾಲೂಕು ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಶ್ರೀಪತಿ ಭಟ್, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಉಜಿರೆ ಎಸ್ ಡಿ ಎಂ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಕಿರಣ್ ವೇದಿಕೆಯಲ್ಲಿ ಇದ್ದರು.ಗಮಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಕೆ ಸುರೇಶ್ ಕುದ್ರೆಂತಾಯ, ಪ್ರೊ. ವೇದವ್ಯಾಸ ರಾಮಕುಂಜ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್, ಕಯ್ಯೂರು ನಾರಾಯಣ ಭಟ್, ಗಮಕಿ ಸುವರ್ಣ ಕುಮಾರಿ ಕೆ ಆರ್. , ಗಮಕಿ ಏ.ಡಿ ಸುರೇಶ್ ಇವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಪಾವಂಜೆ ಹರಿದಾಸ ಲಕ್ಷ್ಮಿನಾರ್ಣಪ್ಪಯ್ಯ ಪ್ರಶಸ್ತಿ ಪ್ರದಾನ ನಡೆಯಿತು. ಡಾ.ದಿವಾ ಕೊಕ್ಕಡ ಸಮ್ಮಾನಿತರು ಹಾಗು ರಾಜೇಶ್ವರಿ ಸಮ್ಮೇಳನ ಸರ್ವಾಧ್ಯಕ್ಷರನ್ನು ಪರಿಚಯಿಸಿದರು. ಗಮಕ ಕಲಾ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಸ್ವಾಗತಿಸಿ ಪ್ರಸ್ತಾವಿಸಿ, ಶಿಕ್ಷಕಿ ತ್ರಿವೇಣಿ ವಂದಿಸಿದರು. ಎಸ್ ಡಿಎಂ ವಸತಿ ಪ.ಪೂ ಕಾಲೇಜು ಪ್ರಾಂಶುಪಾಲ ಸುನಿಲ್ ಪಂಡಿತ್ ನಿರೂಪಿಸಿದರು.