ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಜಾಗೃತಿವಹಿಸಿ: ಡಾ. ಎನ್.ಟಿ. ಶ್ರೀನಿವಾಸ್

KannadaprabhaNewsNetwork | Published : Jun 12, 2024 12:38 AM

ಸಾರಾಂಶ

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ ಅವರು ರೈತರಿಗೆ ಸಬ್ಸಿಡಿ ದರದ ಶೇಂಗಾ ಬೀಜ ವಿತರಿಸಿದರು. ರೈತರಿಗೆ ಶೇಂಗಾ ಬೀಜ ಕೊರತೆಯಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕೂಡ್ಲಿಗಿ: ಕಳೆದ ವರ್ಷ ಮಳೆ ಕೊರತೆಯಿಂದ ರೈತರು ನಷ್ಟ ಹೊಂದಿರುವ ಕಾರಣ ರೈತರ ಬಳಿ ಬಿತ್ತನೆಗೆ ಶೇಂಗಾ ಬೀಜ ಇಲ್ಲವಾಗಿದೆ. ಹೀಗಾಗಿ ತಾಲೂಕಿನಲ್ಲಿ ರೈತರಿಗೆ ಶೇಂಗಾ ಬೀಜ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ತಾಲೂಕಿನ ಕಾನಹೊಸಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ರೈತರಿಗೆ ಸಬ್ಸಿಡಿ ದರದ ಶೇಂಗಾ ಬೀಜ ವಿತರಿಸಿ ಆನಂತರ ಮಾತನಾಡಿದರು. ಸದ್ಯ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದಕ್ಕೆ ರೈತಾಪಿ ವರ್ಗ ಸಂತಸವಾಗಿದೆ. ಹೀಗಾಗಿ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಅವರಿಗೆ ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಮಾಡುವ ಕೆಲಸವನ್ನು ಕೃಷಿ ಅಧಿಕಾರಿಗಳು ಮಾಡಬೇಕು. ಅಲ್ಲದೆ ಗುಡೇಕೋಟೆ, ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿ ಶೇಂಗಾ ಬಿತ್ತನೆ ಮಾಡುತ್ತಾರೆ. ಈ ಭಾಗದ ಎಲ್ಲ ರೈತರಿಗೆ ಶೇಂಗಾ ಬೀಜ ತಲುಪಿಸಿ ಎಂದರು. ರೈತರು ಬೆಳೆ ವಿಮೆ ಪಾವತಿಸುವುದನ್ನು ಮರೆಯಬಾರದು ಎಂದರು.

ಬೆಳೆವಿಮೆ ಬಂದಿಲ್ಲ ಎಂದ ರೈತರು: ಈ ವೇಳೆ ಕೆಲವು ರೈತರು ನಾವು ಬೆಳೆ ವಿಮೆ ಮಾಡಿಸಿದ್ದರೂ ನಮಗೆ ಹಿಂದಿನ ವರ್ಷ ವಿಮೆ ಹಣ ಬಂದಿಲ್ಲ. ಅಲ್ಲದೆ ಕೃಷಿ ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡುವಾಗ ಆಗಿರುವ ಯಡವಟ್ಟಿನಿಂದ ನಮಗೆ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ರೈತರ ವಿಮೆ ಹಣ ಬರದಿದ್ದಕ್ಕೆ ಸ್ಪಂದಿಸಿದ ಶಾಸಕರು, ಕೃಷಿ ಅಧಿಕಾರಿ ಸುನೀಲ್ ಕುಮಾರ್ ಅವರಿಗೆ ಮರುಪರಿಶೀಲನೆ ಮಾಡಿ ವಿಮೆ ಹಣ ರೈತರಿಗೆ ತಲುಪುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.

ತಾಲೂಕು ಕೃಷಿ ಅಧಿಕಾರಿ ಸುನೀಲ್ ಕುಮಾರ್ ಮಾತನಾಡಿ, ಕಳೆದ ವರ್ಷ ಬೆಳೆ ವಿಮೆ ಮಾಡಿಸಿದ ಬಹುತೇಕ ರೈತರಿಗೆ ವಿಮೆ ಹಣ ತಾಲೂಕಿಗೆ ₹6.19 ಕೋಟಿ‌ ವಿಮೆ ಹಣ ಬಂದಿದೆ. ಉಳಿದ ರೈತರಿಗೆ ತಾಂತ್ರಿಕ ಕಾರಣದಿಂದ ಪಾವತಿ ಅಗಿಲ್ಲ, ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಈ ವರ್ಷ ಸಹ ರೈತರು ಬೆಳೆ ವಿಮೆ ಮಾಡಿಸಬೇಕು ಎಂದು ಹೇಳಿದರು. ಬಹುತೇಕ ರೈತರು ಡಿಎಪಿ ಗೊಬ್ಬರ ಬಳಸುತ್ತಾರೆ. ಅದರ ಜತೆಗೆ ಕಾಂಪ್ಲೆಕ್ಸ್ ಗೊಬ್ಬರ ಬಳಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಕೃಷಿಕ ಸಮಾಜ ನಿರ್ದೇಶಕ ಬಣವಿಕಲ್ಲು ಎರ್ರಿಸ್ವಾಮಿ, ಕುರಿಹಟ್ಟಿ ಬೋಸಯ್ಯ, ಕಕ್ಕುಪಿ ಬಸವರಾಜ್, ಎಳ್ಳೆನೀರು ಗಂಗಣ್ಣ, ಫೋಟೋ ಸಿದ್ದಲಿಂಗಪ್ಪ, ಸೂರ್ಯಪ್ರಕಾಶ್, ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಚೈತ್ರಾ, ಶ್ರವಣಕುಮಾರ್, ನೀಲಾನಾಯ್ಕ, ರಾಮಕೃಷ್ಣ, ರಾಕೇಶ್ ರೆಡ್ಡಿ, ರೈತ ಮುಖಂಡರಾದ ಬಿ.ಟಿ. ಗುದ್ದಿ ದುರುಗೇಶ್, ಲಕ್ಕಿ ಮಲ್ಲಿಕಾರ್ಜುನ, ಪೂಜಾರಹಳ್ಳಿ ತಿಪ್ಪೇಸ್ವಾಮಿ, ಮನೋಜಕುಮಾರ್, ಹರೀಶ್ ಇದ್ದರು.

Share this article