ಕನ್ನಡಪ್ರಭ ವಾರ್ತೆ ಮಂಗಳೂರು
ಆಳ್ವಾಸ್ ನುಡಿಸಿರಿ, ಜಾಂಬೂರಿ, ವಿರಾಸತ್ ಮೂಲಕ ಕೃಷಿ ಮೇಳಗಳನ್ನು ನಡೆಸುತ್ತಾ ಬಂದಿರುವ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಜೂ. 14 ರಿಂದ 16ರ ವರೆಗೆ ‘ಸಮೃದ್ಧಿ’ ಹಲಸು, ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ, ಕೃಷಿ ಹಾಗೂ ಕರಕುಶಲ ವಸ್ತುಗಳ ಸಂಗ್ರಹ ಮತ್ತು ಮಾರಾಟ ಮೇಳ ಆಯೋಜಿಸಿದೆ.ವಿದ್ಯಾಗಿರಿಯ ಮುಂಡ್ರುದೆಗುತ್ತ ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ (ಕೃಷಿ ಸಿರಿ ವೇದಿಕೆ) ಈ ಮಹಾವೇಳ ನಡೆಯಲಿದ್ದು, 300ಕ್ಕೂ ಅಧಿಕ ವೈವಿಧ್ಯಮಯ ಮಳಿಗೆಗಳು, 15ಕ್ಕೂ ಅಧಿಕ ವಿವಿಧ ರಾಜ್ಯಗಳ ಕರಕುಶಲ ಗೃಹ ಬಳಕೆಯ ಸ್ವದೇಶಿ ವಸ್ತುಗಳ ಮಳಿಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ತೆರೆದುಕೊಳ್ಳಲಿವೆ ಎಂದು ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜೂ. 14ರಂದು ಬೆಳಗ್ಗೆ 10 ಗಂಟೆಗೆ ದ.ಕ. ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮೇಳದ ಉದ್ಘಾಟನೆ ನೆರವೇರಿಸಲಿದ್ದು, ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮೂಲ್ಕಿ - ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮ ಮುನ್ನೋಟದ ಮಾತುಗಳನ್ನಾಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಈ ಮೇಳದ ವಿಶೇಷ ಆಕರ್ಷಣೆಯಾಗಿ ಬೆಂಗಾಲಿ, ಒಡಿಶಾ, ಆಂಧ್ರ, ಜಮ್ಮು, ಲಕ್ನೊ, ಬಗಲ್‌ಪುರ, ಜೈಪುರ, ಗುಜರಾತ್, ಪಂಜಾಬ್, ರಾಜಸ್ತಾನ, ಸೂರತ್ ಹಾಗೂ ಬಿಹಾರ್ ರಾಜ್ಯಗಳ ಬಗೆಬಗೆಯ ಕೈಮಗ್ಗದ ಉಡುಪುಗಳು, ಕಾಟನ್ ಸಿಲ್ಕ್ ಸೀರೆಗಳು ಮತ್ತು ವಿವಿಧ ಸಿದ್ಧ ಉಡುಪುಗಳು, ಕೈಯಿಂದ ತಯಾರಿಸಿದ ಮರದ ಕರಕುಶಲ ವಸ್ತುಗಳು, ಮರದ ಆಟಿಕೆಗಳು, ಚನ್ನಪಟ್ಟಣದ ಆಟಿಕೆಗಳು, ಬಿದಿರಿನ ಕೈ ಚೀಲಗಳ ಉತ್ತರ ಭಾರತದ ಮಳಿಗೆಗಳು ಮೇಳದಲ್ಲಿ ಇರಲಿವೆ ಎಂದು ಡಾ. ಮೋಹನ್ ಆಳ್ವ ವಿವರಿಸಿದರು.ಹಲಸಿನ ವಿವಿಧ ತಳಿಗಳ ಪ್ರದರ್ಶನ-ಮಾರಾಟ: ಹಲಸು ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯಮಯ ಹಲಸಿನ ತಳಿಗಳ ಸಂಗ್ರಹ ಹಾಗೂ ಪ್ರದರ್ಶನ ಇರಲಿದೆ. ಇದರೊಂದಿಗೆ ಮಾವು, ಪಪ್ಪಾಯ, ಅನಾನಸು, ಪೇರಳೆ, ಕಲ್ಲಂಗಡಿ, ನೇರಳೆಯಂತಹ ದೇಶಿಯ ಹಣ್ಣುಗಳು, ತರಕಾರಿಗಳು ಮತ್ತು ರಂಬುಟನ್, ಮ್ಯಾಂಗೋಸ್ಟಿನ್, ಡ್ರ್ಯಾಗನ್ ಪ್ರೂಟ್, ಬಟರ್ ಪ್ರೂಟ್‌ನಂತಹ ವಿದೇಶಿ ಹಣ್ಣಿನ ತಳಿಗಳ ಸಂಗ್ರಹ ಇರಲಿವೆ. ಆಹಾರೋತ್ಸವದಲ್ಲಿ ಹಣ್ಣು ತರಕಾರಿಗಳಿಂದಲೇ ವಿಶೇಷವಾಗಿ ತಯಾರಿಸಿದ ಖಾದ್ಯಗಳು, ಜೈನ, ಬ್ರಾಹ್ಮಣ, ಗೌಡ ಸಾರಸ್ವತ ಸಮುದಾಯಗಳ ಪ್ರಾದೇಶಿಕ ಶುದ್ಧತಿಂಡಿ ತಿನಿಸುಗಳ ಮಾರಾಟ, ಹಲಸಿನಿಂದ ತಯಾರಿಸಲ್ಪಡುವ ವಿವಿಧ ಆಹಾರ ಉತ್ಪನ್ನಗಳು ಹಾಗೂ ಕರಾವಳಿ ಭಾಗದ ಮಳೆಗಾಲದ ವಿಶೇಷ ತಿನಿಸುಗಳು ವಿವಿಧ ಮಳಿಗೆಗಳಲ್ಲಿ ಲಭ್ಯವಾಗಲಿವೆ ಎಂದು ಡಾ. ಮೋಹನ್ ಆಳ್ವ ತಿಳಿಸಿದರು. ಕೃಷಿ ಚಟುವಟಿಕೆಗಳ ದರ್ಶನ: ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಿವಿಧ ಕೃಷಿ ಉಪಕರಣಗಳು, ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ, ವಿವಿಧಜಾತಿಯ ಪಲ ಪುಷ್ಪಗಳ ಸಸ್ಯಗಳ ನರ್ಸರಿ, ಬಿತ್ತನೆಗೆ ಯೋಗ್ಯವಾದ ಬೀಜಗಳು, ನವವಿಧ ಸಿರಿಧಾನ್ಯಗಳ ಬೃಹತ್ ಸಂಗ್ರಹ ಇರಲಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಬಲೀಕರಣ- ಸ್ವಾವಲಂಬನೆ ಮತ್ತು ಕೌಶಲ್ಯ ತರಬೇತಿ ಪಲಾನುಭವಿಗಳ ಸಿರಿ ಸ್ವದೇಶಿ ಉತ್ಪನ್ನಗಳ ಬೃಹತ್ ಸಂಗ್ರಹ ಇರಲಿದೆ ಎಂದು ಅವರು ತಿಳಿಸಿದರು.
ಸಮೃದ್ಧಿ ಮಹಾಮೇಳ ಸಮಿತಿಯ ಸಂಯೋಜಕ ಡಾ. ಶಶಿಕುಮಾರ, ಸದಸ್ಯರಾದ ರಾಜವರ್ಮ ಬೈಲಂಗಡಿ, ಪ್ರಸಾದ ಶೆಟ್ಟಿ, ದೀಪಕ ಕೊಳಕೆ ಇದ್ದರು.ರೀಲ್ಸ್ ಸ್ಪರ್ಧೆಮಹಾಮೇಳದ ಮೊದಲ ದಿನ ರೀಲ್ಸ್ ತಯಾರಕರು, ತಮ್ಮ ಪ್ರತಿಭೆ ಹಾಗೂ ಸೃಜನಾಶೀಲತೆಯನ್ನು ಉಪಯೋಗಿಸಿ, ಆಕರ್ಷಕ ಹಾಗೂ ಗುಣಾತ್ಮಕ ರೀಲ್ಸ್‌ಗಳನ್ನು ತಯಾರಿಸಿ, ತಮ್ಮ ಖಾತೆಗಳಲ್ಲಿ ಪ್ರಸಾರ ಮಾಡಿ, (ಇನ್ಸ್ಟಾಗ್ರಾಂ ಹಾಗೂ ಪೇಸ್‌ಬುಕ್), ಹೆಚ್ಚು ವೀಕ್ಷಣೆಗೊಳಪಡುವ ಪರಿಣಾಮಕಾರಿ ರೀಲ್ಸ್‌ಗಳಿಗೆ ಸಂಘಟಕರ ನಿರ್ಧಾರದಂತೆ ಪ್ರಥಮ ಬಹುಮಾನ 10,000 ರು. ಹಾಗೂ ದ್ವಿತೀಯ ಬಹುಮಾನ 5,000 ರು. ಪಡೆಯುವ ಅವಕಾಶವಿದೆ. ಹೆಚ್ಚಿನ ವಿವರಗಳಿಗೆ 9164322329 ನಂಬರನ್ನು ಸಂಪರ್ಕಿಸಬಹುದು ಎಂದು ಡಾ.ಮೋಹನ ಆಳ್ವ ತಿಳಿಸಿದರು.ಮಳಿಗೆ ತೆರೆಯಲು ಅವಕಾಶ
ಹಲಸು ಮಹಾಮೇಳದಲ್ಲಿ ಹಲಸು, ಹಣ್ಣು ಹಂಪಲು ಮತ್ತು ಅವುಗಳ ಸಿದ್ಧ ಉತ್ಪನ್ನಗಳು, ದೇಶೀಯ ಸಸ್ಯಹಾರಿ ತಿಂಡಿ ತಿನಿಸುಗಳು, ಕೃಷಿ ಪರಿಕರಗಳು, ಕರಕುಶಲ ವಸ್ತುಗಳು, ವೈವಿಧ್ಯಮಯ ಪಲಪುಷ್ಪ ಸಸ್ಯಗಳ ನರ್ಸರಿಗಳು, ದೇಶಿಯ ಉಡುಪುಗಳು, ಸಿರಿ ಧಾನ್ಯ ಹಾಗೂ ಸ್ವದೇಶಿ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲು ಆಸಕ್ತಿ ಉಳ್ಳವರು, ಈ ನಂಬರಗಳನ್ನು ಸಂಪರ್ಕಿಸಬಹುದು- 9113019074 8197025728.