ಬಿಜೆಪಿಯವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ: ಡಾ. ಜಿ. ಪರಮೇಶ್ವರ

KannadaprabhaNewsNetwork |  
Published : Jul 31, 2024, 01:06 AM IST
ಪರಂ | Kannada Prabha

ಸಾರಾಂಶ

ಮುಡಾ ಹಗರಣ ಕುರಿತು ಬಿಜೆಪಿಯವರು ಪಾದಯಾತ್ರೆ ಏಕೆ ಮಾಡುತ್ತಿದ್ದೇವೆ ಎಂಬುದರ ಕುರಿತು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮುಡಾ ಹಗರಣ ಕುರಿತು ಬಿಜೆಪಿಯವರು ಪಾದಯಾತ್ರೆ ಏಕೆ ಮಾಡುತ್ತಿದ್ದೇವೆ ಎಂಬುದರ ಕುರಿತು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ನಗರದಲ್ಲಿ ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಹೆಚ್ಚಿಗೆ ವಿವರಣೆ ನೀಡುವುದಿಲ್ಲ. ತನಿಖೆಯಿಂದ, ಯಾರ್‍ಯಾರು ಸೈಟ್ ತೆಗೆದುಕೊಂಡಿದ್ದಾರೆ ಎಂಬುದು ಹೊರಗಡೆ ಬರಲಿದೆ ಎಂದರು.

ಇದು ನಿರೀಕ್ಷಿತ

ತಾವು ಗುರುತಿಸಿಕೊಳ್ಳಬೇಕೆಂಬ ಆಸೆಯಿಂದ ಪಾದಯಾತ್ರೆಯಿಂದ ಜೆಡಿಎಸ್ ಹೊರಗಡೆ ಹೋಗುತ್ತಿದೆ. ಬಿಜೆಪಿಯಲ್ಲೂ ಒಗ್ಗಟ್ಟಿಲ್ಲ. 14 ತಿಂಗಳು ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದಾಗಲೂ ಬಿಟ್ಟು ಹೋದರು. ಇದು ನಿರೀಕ್ಷಿತ ಎಂದು ಟಾಂಗ್ ಕೊಟ್ಟರು.

ಪಾದಯಾತ್ರೆಗೆ ಪರವಾನಗಿ ಕೊಡಲು ಬರಲ್ಲ

ಬಿಜೆಪಿಯಲ್ಲಿ ಗುಂಪುಗಳಿವೆ. ಜೆಡಿಎಸ್ ಪಾದಯಾತ್ರೆಗೆ ಸಹಕಾರ ಕೊಡುತ್ತಿಲ್ಲವೆಂದರೆ ನೀವೇ (ಮಾಧ್ಯಮದವರು) ಊಹೆ ಮಾಡಿ. ಸೈಟ್ ಹಂಚಿಕೆಯಲ್ಲಿ ಕಾನೂನು ಬಾಹಿರವಾಗಿ ಏನು ನಡೆದಿದೆ ಎಂಬುದು ಬಿಜೆಪಿಯವರಿಗೆ ಗೊತ್ತಿದೆ. ನಮ್ಮ ಇಲಾಖೆಯಿಂದ ಪಾದಯಾತ್ರೆಗೆ ಪರವಾನಗಿ ಕೊಡಲು ಬರುವುದಿಲ್ಲ. ಪಾದಯಾತ್ರೆ ಮಾಡುವುದು ಬಿಜೆಪಿಯವರ ಹಕ್ಕು. ರಾಜಕೀಯ ಕಾರಣಕ್ಕಾಗಿ ಮಾಡುತ್ತಿದ್ದಾರೆ. ಪಾದಯಾತ್ರೆ ವೇಳೆ ಶಾಂತಿಗೆ ಭಂಗ ತರುವುದು ಹಾಗೂ ಕಾನೂನು ಬಾಹಿರವಾಗಿ ನಡೆದುಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಯವರು ನಮಗಿಂತ ಮುಂಚೆ ನೆರೆಪೀಡಿತ ಪ್ರದೇಶಕ್ಕೆ ಹೋಗಿಲ್ಲ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಭೇಟಿ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರವಾಸ ಮಾಡುತ್ತಿದ್ದಾರೆ. ಇದನ್ನು ನೋಡಿ ಬಿಜೆಪಿಯವರಿಗೆ ಈಗ ತಲೆಯಲ್ಲಿ ಬಂದಿದೆ ಎಂದು ದೂರಿದರು.

ವಿಶೇಷ ಅರ್ಥ ಕಲ್ಪಿಸಬೇಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ದೆಹಲಿಗೆ ಹೋಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಆಡಳಿತ ಪಕ್ಷವಾಗಿರುವುದರಿಂದ ಹೈಕಮಾಂಡ್ ಬಳಿ ಹೋಗಿದ್ದಾರೆ. ಅವರ ಸಲಹೆ-ಸೂಚನೆ ಪಡೆಯಲಿದ್ದಾರೆ. ಇದೇ ಸಂದರ್ಭದಲ್ಲಿ ಹೋಗಿರುವುದರಿಂದ ಗಮನ ಸೆಳೆಯುತ್ತಿದೆ ಅಷ್ಟೇ. ನಾರ್ಮಲ್ ಕೋರ್ಸ್‌ನಲ್ಲಿ ಹೈಕಮಾಂಡ್‌ನವರು ಕರೆದಿದ್ದಾರೆ ಎಂದರು.

ಕೇರಳದ ವಯನಾಡಿನಲ್ಲಾಗಿರುವ ಭೂಕುಸಿತ ಘಟನೆ ನೋವು ತರಿಸಿದೆ. ಇದು ದುಃಖದ ಸಂಗತಿ. ಸಂತಾಪ ವ್ಯಕ್ತಪಡಿಸುವೆ. ಮೃತ ಕುಟುಂಬದವರಿಗೆ ಸಹಾಯ ಮಾಡುತ್ತೇವೆ. ರಾಜ್ಯದಿಂದಲೂ ನೆರವಿನ ಹಸ್ತ ಚಾಚುತ್ತೇವೆ ಎಂದರು.

ಶೀಘ್ರ ಬಗೆಹರಿಯಲಿದೆ

ಪಿಎಸ್‌ಐ ನೇಮಕ ಪ್ರಕ್ರಿಯೆ ವಿಳಂಬ ಆಗಿದೆ. ಕೋರ್ಟ್‌ನಲ್ಲಿದ್ದ ಪ್ರಕರಣವನ್ನು ಬಗೆಹರಿಸಿ ಮರು ಪರೀಕ್ಷೆ ನಡೆಸಲಾಗಿದೆ. ಒಂದೆರಡು ತಾಂತ್ರಿಕ ಸಮಸ್ಯೆ ಇದೆ. ಕಲ್ಯಾಣ ಕರ್ನಾಟಕದ ಮೀಸಲಾತಿಗೆ ಸಂಬಂಧಿಸಿದಂತೆ ಗೊಂದಲಗಳಿವೆ. ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಸಭೆ ಮಾಡಿ ಚರ್ಚಿಸಿದ್ದೇವೆ. ಶೀಘ್ರವೇ ಬಗೆಹರಿಸಲಾಗುವುದು ಎಂದರು.

ಪರಿಹಾರ ಕೊಡಲು ಬರಲ್ಲ

ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬದವರಿಗೆ ಆಶ್ರಯ ಮನೆ ಕೊಡುವುದಾಗಿ ಹೇಳಿದ್ದೇವೆ. ಬೇರೆ ಕಾರ್ಯಕ್ರಮದ ಅಡಿ ಧನಸಹಾಯ ಮಾಡಲಾಗುವುದು. ಕೊಲೆ ಪ್ರಕರಣದಲ್ಲಿ ಪರಿಹಾರ ಕೊಡಲು ಬರುವುದಿಲ್ಲ. ಈ ಪ್ರಕರಣ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದರು.

PREV

Recommended Stories

ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​