ಜನರಿಗೆ ‘ಮಾಡಬೇಡಿ’ ಅನ್ನುವ ಬಿಜೆಪಿ ‘ಏನು ಮಾಡಿದೆ’ ಹೇಳಲಿ : ಹೆಬ್ಬಾಳಕರ್

KannadaprabhaNewsNetwork |  
Published : May 17, 2026, 02:30 AM IST
16ಲಕ್ಷ್ಮೀ | Kannada Prabha

ಸಾರಾಂಶ

ಬಿಜೆಪಿ ನಾಯಕರು ಜನರಿಗೆ ಅದು ಮಾಡಿ, ಅದು ಮಾಡಬೇಡಿ ಎಂದು ಉಪದೇಶ ಮಾಡುವುದೇ ಕೆಲಸ. ಜನರನ್ನು ಬಿಡಿ, ಅವರೇನು ಮಾಡಿದ್ದಾರೆ ಎಂದು ಮೊದಲು ಹೇಳಲಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಉಡುಪಿ: ಬಿಜೆಪಿ ನಾಯಕರು ಜನರಿಗೆ ಅದು ಮಾಡಿ, ಅದು ಮಾಡಬೇಡಿ ಎಂದು ಉಪದೇಶ ಮಾಡುವುದೇ ಕೆಲಸ. ಜನರನ್ನು ಬಿಡಿ, ಅವರೇನು ಮಾಡಿದ್ದಾರೆ ಎಂದು ಮೊದಲು ಹೇಳಲಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಮೋದಿಯವರು ಗಂಟೆ ಬಾರಿಸಬೇಕು ಅಂದ್ರೆ ನಾವು ಗಂಟೆ ಬಾರಿಸುತ್ತೇವೆ. ಚಪ್ಪಾಳೆ ಹೊಡೀರಿ ಅಂದ್ರೆ ಹೊಡೆಯುತ್ತೇವೆ. ಪೆಟ್ರೋಲ್ ಡೀಸೆಲ್ ಜಾಸ್ತಿ ಬಳಸಬೇಡಿ ಅಂದ್ರೆ ನಾವು ಪಾಲಿಸುತ್ತೇವೆ. ಬಂಗಾರ ಖರೀದಿಸಬೇಡಿ ಎಂದರೆ ಅದನ್ನೂ ಮಾಡುತ್ತೇವೆ. ದೇಶಕ್ಕಾಗಿ ಇತಿಮಿತಿಯನ್ನು ಪಾಲಿಸೋಣ. ಆದರೆ ಇಂತಹ ಪರಿಸ್ಥಿತಿ ಬರುವುದಕ್ಕೆ ಕಾರಣ ಯಾರು ? ಅದು ಮಾಡಿ ಇದು ಮಾಡಿ ಎಂಬುದೇ ಆಯ್ತು. ಆದರೆ ಇವರೇನು ಮಾಡಿದ್ದಾರೆ, ಏನು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಈಗ ಮೋದಿ ಬಂಗಾರ ಖರೀದಿ ಮಾಡಬೇಡಿ ಎನ್ನುತ್ತಿದ್ದಾರೆ. ಆದರೆ ಅಮೆರಿಕ ಯಾವ ರೀತಿ ನಮ್ಮ ಪ್ರಧಾನ ಮಂತ್ರಿಯನ್ನು ಕಂಟ್ರೋಲ್ ಮಾಡುತ್ತಿದೆ ಅಂತ ಮಾಧ್ಯಮದಲ್ಲೇ ನೋಡುತ್ತಿದ್ದೇವೆ. ಭಾರತದ ಬಗ್ಗೆ ಟ್ರಂಪ್ ಏನು ಹೇಳುತ್ತಿದ್ದಾರೆ ಗೊತ್ತಲ್ಲ ಎಂದು ವ್ಯಂಗ್ಯವಾಡಿದರು.

ಪಂಚರಾಜ್ಯ ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದು ಸಂಪೂರ್ಣ ರಾಜಕಾರಣ. ಈಗೇನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿಲ್ಲ‌. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಕಚ್ಚಾ ತೈಲ ಬೆಲೆ ಎಷ್ಟು ಏರಿತ್ತು ಎಂಬುದು ಗೊತ್ತಿದೆ.‌ ಆದರೂ ಅವರು ಜನರಿಗೆ ಬರೆ ಹಾಕುವ ಕೆಲಸ ಮಾಡಲಿಲ್ಲ. ಈಗ ದಿಢೀರ್ ಆಗಿ 3 ರೂಪಾಯಿ ಬೆಲೆ ಏರಿಸಿ ಜನರ ಮೇಲೆ ಹೊರೆ ಹಾಕಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಹಿಜಾಬ್ ವಿವಾದ ಕುರಿತ ಪ್ರಶ್ನೆಗೆ, ಶಿಕ್ಷಣದಲ್ಲಿ ರಾಜಕಾರಣ ಮಾಡಬಾರದು. ಮಕ್ಕಳು ಮುಗ್ಧರಿದ್ದಾರೆ, ಪಾಲಕರು ಕಲಿಯುವುದಕ್ಕೆಂದು ಶಾಲೆಗೆ ಕಳಿಸುತ್ತಾರೆ. ಈ ವಿಚಾರದಲ್ಲಿ ಹೆಚ್ಚು ಚರ್ಚೆ ಮಾಡದೇ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ವಾತಾವರಣ ಸೃಷ್ಟಿ ಮಾಡಬೇಕೆಂದು ಮಾತ್ರ ಹೇಳುತ್ತೇನೆ. ಅವರ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಹಿಜಾಬ್ ಅಥವಾ ಇನ್ನಾವುದೇ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ.‌ ಮಕ್ಕಳ ಭವಿಷ್ಯ ತಲೆಯಲ್ಲಿಟ್ಟು ರಾಜಕಾರಣ ಮಾಡಬೇಕು ಎಂದರು. ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಎಲ್ಲವೂ ಪಕ್ಷದ ಹೈಕಮಾಂಡ್ ತೀರ್ಮಾನ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ನಾವೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಖಡಕ್‌ ಕ್ರಮ ಕೈಗೊಳ್ಳುತ್ತೇನೆ: ಬಾಗಲಕೋಟೆಯಲ್ಲಿ ಅಂಗನವಾಡಿಯಿಂದ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪದ ಪ್ರಶ್ನೆಗೆ, ಯಾವುದೇ ಅಂಗನವಾಡಿಯಿಂದ ಹಣ ತಗೊಂಡಿದ್ದಿಲ್ಲ. ಯಾರೇ ಹಣ ಕಲೆಕ್ಷನ್ ಮಾಡಿದ್ದಲ್ಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇನೆ. ತನಿಖೆಯನ್ನು ಕೈಗೊಳ್ಳುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಿರಿಜನ ಹಾಡಿಯಲ್ಲಿ ಅನಧಿಕೃತ ಚರ್ಚ್: ತಮಿಳುನಾಡು ಮೂಲದ ಮಂದಿ ವಶಕ್ಕೆ
ಕಾರಿಂಜ ಸಹಿತ ಎರಡು ದೇವಸ್ಥಾನಕ್ಕೆ ಸಿಡಿಲಾಘಾತ