ಮಕ್ಕಳ ಪರ ಕಾರ್ಯಕ್ರಮ ರೂಪಿಸಲು ಮಕ್ಕಳ ಸಂಸತ್ ವೇದಿಕೆಯಾಗಲಿ: ನ್ಯಾ.ಚಂದ್ರಶೇಖರ ದಿಡ್ಡಿ

KannadaprabhaNewsNetwork |  
Published : Nov 14, 2025, 04:00 AM IST
ಜಿಲ್ಲಾ ಮಟ್ಟದ ಮಕ್ಕಳ ಸಂಸತ್ 2025 | Kannada Prabha

ಸಾರಾಂಶ

ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಗರ್ಭದಿಂದಲೇ ಮಗುವಿಗೆ ಕಾನೂನು ರಕ್ಷಣೆ ಸಿಗುತ್ತದೆ. ಮಕ್ಕಳಿಗಾಗಿ ಹಲಾವಾರು ಕಾನೂನುಗಳಿವೆ. ಸಂಸತ್ ಮೂಲಕ ಈ ಮಕ್ಕಳು ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯ ಮಟ್ಟದಲ್ಲಿ ಮಕ್ಕಳಿಗಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಕ್ರೋಡೀಕರಿಸಿ ರಾಜ್ಯಮಟ್ಟದ ಸಭೆಯಲ್ಲಿ ಮಂಡಿಸಿ ಸರ್ಕಾರ ಮಟ್ಟದಲ್ಲಿ ಮಕ್ಕಳ ಪರವಾಗಿ ಹೊಸ ಕಾರ್ಯಕ್ರಮ ರೂಪಿಸಲು ಈ ಮಕ್ಕಳ ಸಂಸತ್ ಯಶಸ್ವಿಯಾಗಲಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯರಾದ ನ್ಯಾ.ಚಂದ್ರಶೇಖರ ದಿಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಗರ್ಭದಿಂದಲೇ ಮಗುವಿಗೆ ಕಾನೂನು ರಕ್ಷಣೆ ಸಿಗುತ್ತದೆ. ಮಕ್ಕಳಿಗಾಗಿ ಹಲಾವಾರು ಕಾನೂನುಗಳಿವೆ. ಸಂಸತ್ ಮೂಲಕ ಈ ಮಕ್ಕಳು ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯ ಮಟ್ಟದಲ್ಲಿ ಮಕ್ಕಳಿಗಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಕ್ರೋಡೀಕರಿಸಿ ರಾಜ್ಯಮಟ್ಟದ ಸಭೆಯಲ್ಲಿ ಮಂಡಿಸಿ ಸರ್ಕಾರ ಮಟ್ಟದಲ್ಲಿ ಮಕ್ಕಳ ಪರವಾಗಿ ಹೊಸ ಕಾರ್ಯಕ್ರಮ ರೂಪಿಸಲು ಈ ಮಕ್ಕಳ ಸಂಸತ್ ಯಶಸ್ವಿಯಾಗಲಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯರಾದ ನ್ಯಾ.ಚಂದ್ರಶೇಖರ ದಿಡ್ಡಿ ಹೇಳಿದರು.

ಅಕ್ಷಯ ಹಾಲ್ ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಂಸತ್-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ದರೀಚ್ ಸಂಸ್ಥೆಯ ನಿರ್ದೇಶಕ ಹಾಗೂ ಕೆ.ಸಿ.ಆರ್.ಓ ಸದಸ್ಯರಾದ ಜಿ.ಎನ್. ಸಿಂಹ ಆವರು ಮಕ್ಕಳಿಗೆ ಭಾಗವಹಿಸುವ ಹಕ್ಕಿದೆ. ಪ್ರಸ್ತುತ ಸಂದರ್ಭದಲ್ಲಿ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಸತಿ, ಆಹಾರ, ಮೂಲ ಸೌಲಭ್ಯಗಳ ಕುರಿತು ಮಕ್ಕಳ ಸಂಸತ್ ಸಭೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಸೂಕ್ತ ಸಲಹೆ, ಮಾಹಿತಿ ನೀಡುವಲ್ಲಿ ಈ ಸಮಾಲೋಚನೆ ಯಶಸ್ವಿಯಾಗಲೆಂದು ಹಾರೈಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ವೀಣಾ ಎಂ. ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿ ನಂತರ ಬಾಗಲಕೋಟೆ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆ ಮಾಡಲು ಪ್ರೇರಣೆ ನೀಡಿದರು. ದತ್ತು ಮಾಸಾಚರಣೆ ಕುರಿತು ಮಾಹಿತಿ ನೀಡಿದರು. ಕುಮಾರ ಅವರು ಬಾಲ್ಯ ವಿವಾಹ ಮುಕ್ತ ಭಾರತ 100 ದಿನಗಳ ಅಭಿಯಾನ ಅಡಿ ಪ್ರತಿಜ್ಞೆ ಬೋಧಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅದ್ಯಕ್ಷ ಹನುಮಂತಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿಯ ಮಕ್ಕಳ ಸಮಸ್ಯೆಗಳ ಬಗ್ಗೆ ವಿವರಿಸಿ, ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು 5 ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಓರ್ವ ಅಧ್ಯಕ್ಷರು 4 ಸದಸ್ಯರು ಇರಲಿದ್ದಾರೆ. ಇಲ್ಲಿ ಮಕ್ಕಳ ಸಮಸ್ಯೆಗೆ ಪರಿಹಾರ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಕ್ಕಳ ಹಕ್ಕುಗಳು, ವಾತಾವರಣ ಬದಲಾವಣೆ, ಮಕ್ಕಳ ಶಿಕ್ಷಣ ಮಟ್ಟ, ಆರೋಗ್ಯ, ರಕ್ಷಣೆ ಕುರಿತಾಗಿ ಸಂಪನ್ಮೂಲ ವ್ಯಕ್ತಿ ಶೈಲಜಾ ತಿಳಿಸಿಕೊಟ್ಟರು. ನಂತರ ಮಕ್ಕಳನ್ನು 5 ಗುಂಪುಗಳಾಗಿ ಮಾಡಿ ಮಕ್ಕಳ ಸಮಸ್ಯೆ ಹಾಗೂ ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಮಕ್ಕಳು ಮಂಡಿಸಿದ ಮುಖ್ಯಾಂಶಗಳು:

ಶಾಲೆ ಬಿಟ್ಟ ಮಕ್ಕಳ ಸಮಸ್ಯೆಗಳು, ಬಾಲ್ಯವಿವಾಹ ಪದ್ಧತಿ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮಾರಾಟ ಮತ್ತು ಸಾಗಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲಿನ ಕೌಟುಂಬಿಕ ಹಿಂಸೆಗಳು, ಶಾಲೆಯಲ್ಲಿ ದೈಹಿಕ ಶಿಕ್ಷೆ, ಲಿಂಗ ತಾರತಮ್ಯ, ದುಶ್ಚಟಗಳಿಗೆ ಮಕ್ಕಳ ಬಲಿ (ಮದ್ಯ, ಗುಟ್ಕಾ, ಸಿಗರೇಟ್), ಮಕ್ಕಳ ಆತ್ಮಹತ್ಯೆ ಪ್ರಕರಣಗಳು, ಜೀವನ ಕೌಶಲ್ಯಗಳ ಕೊರತೆ, ಸಾರಿಗೆ ಸಂಪರ್ಕ ವ್ಯವಸ್ಥೆ, ಶಾಲೆಯಲ್ಲಿ ಮೂಲ ಅವಶ್ಯಕತೆಗಳು, 18 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆ ವಿಸ್ತರಣೆ, ಮೌಲ್ಯ ಶಿಕ್ಷಣ, ಕಂಪ್ಯೂಟರ್ ಶಿಕ್ಷಣಕ್ಕೆ ಶಿಕ್ಷಕರ ಕೊರತೆ ಕುರಿತು ಪ್ರಸ್ತಾಪಿಸಲಾಯಿತು.

ಪರಿಣಾಮಕಾರಿಯಾಗಿ ವಿಷಯ ಮಂಡಿಸಿದ ಬಾಗಲಕೋಟೆ ನವನಗರದ ಸರಕಾರಿ ಆದರ್ಶ ವಿದ್ಯಾಲಯದ ಪೃಥ್ವಿರಾಘವೇಂದ್ರ ಕುಂಬಳಾವತಿ, ಅಮೀನಗಡ ಇಂದಿರಾಗಾಂಧಿ ವಸತಿ ಶಾಲೆಯ ಸಂತೋಷ ಶಿರೂರ್ ಅವರನ್ನು ರಾಜ್ಯಮಟ್ಟಕ್ಕೆ ಮಕ್ಕಳು ಆಯ್ಕೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು