ಮಕ್ಕಳು ಓದಿನ ಜತೆಗೆ ಉತ್ತಮ ಆಲೋಚನೆ ಮಾಡಲಿ

KannadaprabhaNewsNetwork |  
Published : Apr 19, 2024, 01:06 AM IST
ಮುಂಡರಗಿ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಫಡ್ನೇಶಿ ಮಾತನಾಡಿದರು. | Kannada Prabha

ಸಾರಾಂಶ

ಮಕ್ಕಳು ತಮ್ಮಲ್ಲಿರುವ ಪ್ರತಿಭೆ, ಕ್ರಿಯಾತ್ಮಕ ಚಟುವಟಿಕೆ, ಸೃಜನಶೀಲತೆಯಿಂದ ಭವಿಷ್ಯ ರೂಪಿತವಾಗುತ್ತದೆ

ಮುಂಡರಗಿ: ಮಕ್ಕಳು ನಿರಂತರ ಓದುವುದರ ಜತೆಗೆ ಉತ್ತಮ ಆಲೋಚನೆ ಮಾಡಬೇಕು. ಇಷ್ಟವಾದ ವಿಷಯ ಓದುವ ಮೂಲಕ ತಮಗಿಷ್ಟದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬಹುದು. ಮಕ್ಕಳು ಕೇವಲ ಸರ್ಕಾರಿ ಉದ್ಯೋಗ ಪಡೆಯುವ ಗುರಿ ಹೊಂದದೇ ಇತರರಿಗೆ ಉದ್ಯೋಗ ನೀಡುವ ಉದ್ದಿಮೆದಾರರಾಗಿ ಬೆಳೆಯಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಹೇಳಿದರು.

ಅವರು ಮಂಗಳವಾರ ಮುಂಡರಗಿ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮೇನಹಳ್ಳಿ ಹಾಗೂ ಕಲಾ ಶಿಕ್ಷಣ-ಸಂಸ್ಕೃತಿ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿದ ಮೂರು ದಿನಗಳ ಮಕ್ಕಳಿಗಾಗಿ ಸಾಹಿತ್ಯ ಸಂವಹನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಇಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆ, ಕ್ರಿಯಾತ್ಮಕ ಚಟುವಟಿಕೆ, ಸೃಜನಶೀಲತೆಯಿಂದ ಭವಿಷ್ಯ ರೂಪಿತವಾಗುತ್ತದೆ ಎಂದರು.

ಶಿಬಿರದ ನೇತೃತ್ವ ವಹಿಸಿದ ಶಾಲಾ ಮುಖ್ಯೋಪಾಧ್ಯಾಯ, ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ಬೇಸಿಗೆಯಲ್ಲಿ ಮಕ್ಕಳಿಗೆ ಶಿಬಿರ ಆಯೋಜನೆ ಮಾಡಬೇಕು ಎಂದು ಚಿಂತನೆಯಲ್ಲಿದ್ದಾಗ ಕಸಾಪ ತಾಲೂಕು ಬಳಗ ನನ್ನ ಚಿಂತನೆಗೆ ಕೈಜೋಡಿಸಿದರು. ಮಕ್ಕಳಿಗೆ ಪೂರಕವಾದ ಹಾಗೂ ಸಾಹಿತ್ಯದ ಚಿಂತನೆಯ ಜತೆ ಸಂವಹನ ಬಹಳ ಮುಖ್ಯವಾಗಿದೆ.ಅದಕ್ಕೆ ಈ ಶಿಬಿರದಲ್ಲಿ ಮಕ್ಕಳಿಗಾಗಿ ಸಾಹಿತ್ಯ ಶಿಬಿರ ಅಂತಾ ಹೆಸರಿಟ್ಟು ಮೂರು ದಿನಗಳ ಕಾಲ ವಿವಿಧ ಸಾಧಕರು, ಕವಿ,ಸಾಹಿತಿಗಳನ್ನು ಕರೆಸಿ ಈ ಶಿಬಿರದ ಆಶಯ ಈಡೇರಿಸಲಾಗಿದೆ ಎಂದರು.

ಸಾಹಿತಿ ಆರ್.ಎಲ್. ಪೊಲೀಸ್ ಪಾಟೀಲ ಮಾತನಾಡಿ, ಮೂರು ದಿನಗಳ ಈ ಶಿಬಿರದಲ್ಲಿ ಮಕ್ಕಳು ಕವಿತೆ ಕಟ್ಟೋಣ, ವಚನಗಳ ಓದು, ಕಥೆ ಕಟ್ಟೋಣ, ಬರಹ -ಕಥನ-ವರದಿ ಮುಂತಾದವುಗಳ ಕುರಿತು ಮಕ್ಕಳಿಗೆ ತಿಳಿಸಿರುವುದು ಶಿಬಿರದ ವಿಶೇಷವಾಗಿದೆ ಎಂದರು.

ಶಿಬಿರದಲ್ಲಿ ಭಾಗವಹಿಸಿದ ಪತ್ರಕರ್ತ ಸಿ.ಕೆ.ಗಣಪ್ಪನವರ ಮಾತನಾಡಿ, ವಿಶೇಷವಾಗಿ ಶಿಬಿರದಲ್ಲಿ ವರದಿ ಕಥನ ತಯಾರಿಸುವುದು ಹೇಗೆ, ಕುಬ್ಜ ಎಂಬ ಕಥೆ ಓದಿ ಅದರಲ್ಲಿರುವ ಪಾತ್ರದ ಕುರಿತು ವ್ಯಕ್ತಿತ್ವ ಗುಣ ಗೌರವಿಸುವಂತಹ, ಸಣ್ಣತನ ಧಿಕ್ಕರಿಸಿ ಅವರಲ್ಲಿರುವ ಒಳ್ಳೆಯ ಗುಣ ಗೌರವಿಸಬೇಕು ಎಂದು ವಿವರವಾಗಿ ತಿಳಿಸಿದರು.

ಹಿರಿಯ ಸಾಹಿತಿ ಶಂಕರ ಕುಕನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಿಬಿರದ ಆಯೋಜಕ ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೋಲಗಿ ಅವರನ್ನು ತಾಲೂಕು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ಹನುಮರಡ್ಡಿ ಇಟಗಿ, ಕಾಶಿನಾಥ ಶಿರಬಡಿಗಿ, ವೀಣಾ ಪಾಟೀಲ, ಮಂಜು ಮುಧೋಳ, ಕೃಷ್ಣಮೂರ್ತಿ ಸಾಹುಕಾರ, ಲಿಂಗರಾಜ ಡಾವಣಗೇರಿ, ಬಿ.ಎಚ್. ಹಲವಾಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಕ್ಕಮ್ಮ ಕೊಟ್ಟೂರಶೆಟ್ಟರ ಸ್ವಾಗತಿಸಿ, ಶಿಕ್ಷಕ ಪಿ.ಎಂ.ಲಾಂಡೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ